21 September 2026 |

ಮಂಗಳೂರಿನ ಕದ್ರಿ ಯುದ್ಧ ಸ್ಮಾರಕದಲ್ಲಿ ಐತಿಹಾಸಿಕ ಟಿ-55 ಯುದ್ಧ ಟ್ಯಾಂಕ್ ಸ್ಥಾಪನೆ; ದೇಶಭಕ್ತಿಗೆ ಹೊಸ ಪ್ರತೀಕ

  • 19 Jul 2026 02:18:16 PM

ಮಂಗಳೂರು: ಭಾರತೀಯ ಸೇನೆಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ, 1965 ಹಾಗೂ 1971ರ ಭಾರತ–ಪಾಕಿಸ್ತಾನ ಯುದ್ಧಗಳೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಟಿ-55 ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಕದ್ರಿ ಯುದ್ಧ ಸ್ಮಾರಕ (Kadri War Memorial) ಆವರಣದಲ್ಲಿ ಶಾಶ್ವತವಾಗಿ ಸಾರ್ವಜನಿಕ ವೀಕ್ಷಣೆಗೆ ಸ್ಥಾಪಿಸಲಾಗಿದೆ. ಟ್ಯಾಂಕ್ ಜೊತೆಗೆ ಐತಿಹಾಸಿಕ 303 ರೈಫಲ್ ಕೂಡ ಪ್ರದರ್ಶನಕ್ಕಿಡಲಾಗಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಶೌರ್ಯ ಮತ್ತು ಸೇವೆಗೆ ಗೌರವ ಸಲ್ಲಿಸುವ ಉದ್ದೇಶ ಹೊಂದಿದೆ.  

 

ಸುಮಾರು 40 ಟನ್ ತೂಕದ ಈ ಟ್ಯಾಂಕ್ ಅನ್ನು ವಿಶೇಷ ಕ್ರೇನ್ ಸಹಾಯದಿಂದ ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿದ ವೇದಿಕೆಯ ಮೇಲೆ ಅಳವಡಿಸಲಾಗಿದೆ. 2025ರ ಆಗಸ್ಟ್‌ನಲ್ಲೇ ಪುಣೆಯಿಂದ ಮಂಗಳೂರಿಗೆ ತರಲಾಗಿದ್ದ ಟ್ಯಾಂಕ್, ಸೂಕ್ತ ವ್ಯವಸ್ಥೆ ಪೂರ್ಣಗೊಳ್ಳುವವರೆಗೆ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು.  

 

ಈ ಯುದ್ಧ ಟ್ಯಾಂಕ್ ಅನ್ನು ಮಂಗಳೂರಿಗೆ ತರಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನ ಪ್ರಮುಖವಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅನುಮೋದನೆಯ ಬಳಿಕ ಟ್ಯಾಂಕ್ ಮಂಗಳೂರಿಗೆ ಹಂಚಿಕೆಯಾಗಿತ್ತು. ಭಾರತೀಯ ಸೇನೆಯಲ್ಲಿ 1961ರಿಂದ 2001ರವರೆಗೆ ಸೇವೆ ಸಲ್ಲಿಸಿದ ಈ ಟ್ಯಾಂಕ್ ದೇಶದ ಸೇನಾ ಇತಿಹಾಸದ ಮಹತ್ವದ ನೆನಪಾಗಿದೆ.  

 

ಈ ಪ್ರದರ್ಶನವು ಮಂಗಳೂರಿನ ಹೊಸ ಆಕರ್ಷಣೆಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ದೇಶದ ಸೇನಾ ಪರಂಪರೆಯನ್ನು ಹತ್ತಿರದಿಂದ ಅರಿಯುವ ಅವಕಾಶ ಕಲ್ಪಿಸುವುದರ ಜೊತೆಗೆ ಯುವಜನರಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರುವ ಸ್ಪೂರ್ತಿಯನ್ನು ಮೂಡಿಸಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕರಾವಳಿ ಪ್ರದೇಶದ ಮಳೆ, ತೇವಾಂಶ ಹಾಗೂ ಉಪ್ಪಿನ ಗಾಳಿಯಿಂದ ಟ್ಯಾಂಕ್‌ಗೆ ಹಾನಿಯಾಗದಂತೆ ನಿಯಮಿತ ನಿರ್ವಹಣೆ ಅಗತ್ಯವಿದೆ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.