21 September 2026 |

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಹೆಣ್ಣಾನೆ ಬೇಕು: ಕೇರಳಕ್ಕೆ ಕರ್ನಾಟಕ ಸರ್ಕಾರಕ್ಕೆ ಮನವಿ

  • 19 Jul 2026 03:17:16 PM

ಉಡುಪಿ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಹೆಣ್ಣಾನೆಯನ್ನು ಒದಗಿಸುವಂತೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಕೇರಳ ಸರ್ಕಾರಕ್ಕೆ ಮನವಿ ಮಾಡಿದೆ.

 

ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರಿಗೆ ಪತ್ರ ಬರೆದು, ದೇವಸ್ಥಾನಕ್ಕೆ ಹೆಣ್ಣಾನೆಯನ್ನು ದಾನವಾಗಿ ನೀಡುವಂತೆ ಕೋರಿರುವುದಾಗಿ ವರದಿಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ, ವಿಶೇಷವಾಗಿ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಮನವಿ ಮಹತ್ವ ಪಡೆದಿದೆ.  

 

ಇದಕ್ಕೂ ಮುನ್ನವೂ ಇದೇ ರೀತಿಯ ಮನವಿಯನ್ನು ಕರ್ನಾಟಕ ಸರ್ಕಾರ ಕೇರಳ ಸರ್ಕಾರದ ಮುಂದೆ ಇಟ್ಟಿದ್ದರೂ, ಆ ಸಂದರ್ಭದಲ್ಲಿ ಅದು ಅಂಗೀಕಾರವಾಗಿರಲಿಲ್ಲ ಎನ್ನಲಾಗಿದೆ.

 

ಈ ಬಾರಿ ಕರ್ನಾಟಕದ ಮನವಿಗೆ ಕೇರಳ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ಕುರಿತು ಕೇರಳ ಸರ್ಕಾರದ ಅಧಿಕೃತ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ.