21 July 2026 |

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ನಿದ್ದೆ ಮಾತ್ರೆ ನೀಡಿ ಹಾವಿನಿಂದ ಕಚ್ಚಿಸಿ ಕೊಲೆ, ನಾಲ್ವರ ಬಂಧನ

  • 19 Jul 2026 04:53:41 PM

ಉತ್ತರ ಪ್ರದೇಶ: ಮೀರತ್‌ನಲ್ಲಿ ಪತಿಯನ್ನು ಕೊಲೆಗೈದು ಅದನ್ನು ಸಹಜ ಸಾವಿನಂತೆ ತೋರಿಸಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ಉದ್ದೇಶ ಹಾಗೂ ಜೀವ ವಿಮೆ ಹಣದ ಆಸೆಗಾಗಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿ ನಾಲ್ವರನ್ನು ಬಂಧಿಸಿದ್ದಾರೆ.

 

ಮೃತ ಅತುಲ್ ಅವರ ಪತ್ನಿ ದಾಮಿನಿ ಕೃಷ್ಣ ಕಿಡ್ಸ್ ಸ್ಕೂಲ್ ಎಂಬ ಪ್ಲೇ-ಸ್ಕೂಲ್ ನಡೆಸುತ್ತಿದ್ದರು. ಈ ವೇಳೆ ಶಾಲೆಯ ಚಾಲಕರಾಗಿದ್ದ ತುಷಾರ್ ಅವರೊಂದಿಗೆ ಆಕೆಗೆ ಆತ್ಮೀಯ ಸಂಬಂಧ ಬೆಳೆದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಇಬ್ಬರೂ ಸೇರಿ ಅತುಲ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

 

ಯೋಜನೆಯಂತೆ ದಾಮಿನಿ, ಅತುಲ್ ಅವರಿಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ್ದಾಳೆ. ಅವರು ಗಾಢ ನಿದ್ರೆಗೆ ಜಾರಿದ ಬಳಿಕ ತುಷಾರ್ ವಿಷಪೂರಿತ ಹಾವನ್ನು ತಂದುಕೊಟ್ಟಿದ್ದು, ಅದರಿಂದ ಅತುಲ್ ಅವರಿಗೆ ಕಚ್ಚಿಸಿ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾವನ್ನು ಸಹಜ ಘಟನೆ ಎಂದು ತೋರಿಸುವ ಉದ್ದೇಶದಿಂದಲೇ ಆರೋಪಿಗಳು ಈ ರೀತಿಯ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.

 

ಅತುಲ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಸಂಪೂರ್ಣ ಸಂಚು ಬಯಲಾಗಿದ್ದು, ಹಾವನ್ನು ತರಲು ತುಷಾರ್‌ಗೆ ಸೋನು ಹಾಗೂ ಉದಯ್ ಎಂಬವರು ಸಹಕಾರ ನೀಡಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ದಾಮಿನಿ, ತುಷಾರ್ ಸೇರಿದಂತೆ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.