21 July 2026 |

ಬಿ.ಸಿ ರೋಡಿನಲ್ಲಿ ಲಾವಣ್ಯ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರ ಆಗ್ರಹ

  • 19 Jul 2026 05:31:32 PM

ಬಂಟ್ವಾಳ: ಕಕ್ಯಪದವಿನ ಉಳಿ ಗ್ರಾಮದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಉಳಿ ಹಾಗೂ ಕಕ್ಯಪದವು ಭಾಗದ ಗ್ರಾಮಸ್ಥರು ಭಾನುವಾರ ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ತನಿಖೆಯನ್ನು ಶೀಘ್ರ ಹಾಗೂ ನಿಷ್ಪಕ್ಷಪಾತವಾಗಿ ಪೂರ್ಣಗೊಳಿಸಿ, ಬಲವಾದ ದೋಷಾರೋಪಣಾ ಪತ್ರ ಸಲ್ಲಿಸುವಂತೆ ಒತ್ತಾಯಿಸಿದರು. ಆರೋಪಿಗೆ ಕಠಿಣ ಶಿಕ್ಷೆ ದೊರೆತರೆ ಲಾವಣ್ಯ ಕುಟುಂಬಕ್ಕೆ ನ್ಯಾಯ ಸಿಗುವುದರ ಜೊತೆಗೆ ಇಂತಹ ಅಪರಾಧಗಳಿಗೆ ತಡೆ ಬೀಳಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

 

ಮನವಿ ಸ್ವೀಕರಿಸಿದ ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು, ಸಂತ್ರಸ್ತೆಯ ಕುಟುಂಬದೊಂದಿಗೆ ಪೊಲೀಸ್ ಇಲಾಖೆ ನಿಲ್ಲಲಿದ್ದು, ಆರೋಪಿಗೆ ಕಾನೂನಿನಡಿ ಕಠಿಣ ಶಿಕ್ಷೆ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಪೊಲೀಸ್ ಭದ್ರತೆ ಹೆಚ್ಚಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.