ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ ಅವರ ಸಮಯೋಚಿತ ಕಾರ್ಯಾಚರಣೆ ಮೂವರ ಜೀವ ರಕ್ಷಿಸಲು ನೆರವಾದ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿಯ ಹೋಟೆಲ್ ಎದುರು ಕಾರೊಂದು ಚಾಲಕರ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಉರುಳಿತ್ತು. ಅಪಘಾತದ ಪರಿಣಾಮ ಕಾರಿನೊಳಗೆ ಮಹಿಳೆ, ಮಗು ಮತ್ತು ಚಾಲಕ ಸಿಲುಕಿಕೊಂಡಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅದೇ ಸಮಯದಲ್ಲಿ ಸಮೀಪದಲ್ಲಿ ಮತ್ತೊಂದು ಪ್ರಕರಣದ ತನಿಖಾ ಕರ್ತವ್ಯದಲ್ಲಿ ನಿರತರಾಗಿದ್ದ ಎಸ್‌ಐ ರಾಮಕೃಷ್ಣ ಮತ್ತು ಸಿಬ್ಬಂದಿ ಕರಣಾಕರ ಅವರಿಗೆ ಅಪಘಾತದ ಶಬ್ದ ಕೇಳಿಬಂದ ತಕ್ಷಣ ಸ್ಥಳಕ್ಕೆ ಧಾವಿಸಿದರು. ಯಾವುದೇ ವಿಳಂಬವಿಲ್ಲದೆ ರಕ್ಷಣಾ ಕಾರ್ಯ ಆರಂಭಿಸಿದ ಅವರು ಕಾರಿನೊಳಗೆ ಸಿಲುಕಿದ್ದ ಮೂವರನ್ನೂ ಸುರಕ್ಷಿತವಾಗಿ ಹೊರತೆಗೆದರು.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರೂ, ತಕ್ಷಣದ ನೆರವಿನಿಂದ ಮಗು, ಮಹಿಳೆ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ನಡೆದ ರಕ್ಷಣಾ ಕಾರ್ಯವೇ ದೊಡ್ಡ ಅನಾಹುತ ತಪ್ಪಿಸಿತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅಪಘಾತದ ಬಳಿಕ ಅಳುತ್ತಿದ್ದ ಮಗುವನ್ನು ಎಸ್‌ಐ ರಾಮಕೃಷ್ಣ ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿಯ ಮಾನವೀಯತೆ ಮತ್ತು ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರುಣಾಕರ ಅವರ ಕ್ಷಿಪ್ರ ಸ್ಪಂದನೆ, ಕರ್ತವ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಪೊಲೀಸ್ ಇಲಾಖೆಯ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಇವರ ಕಾರ್ಯಕ್ಕೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.





