ಬಂಟ್ವಾಳ: ಬಿ.ಸಿ.ರೋಡಿನ ಎನ್.ಜಿ. ಸರ್ಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಗುಂಡಿ ಉಂಟಾದ ಪರಿಣಾಮ ಸೋಮವಾರ ಬೆಳಿಗ್ಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಹೆದ್ದಾರಿಯ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಗುಂಡಿಯಿಂದ ವಾಹನಗಳ ವೇಗ ಗಣನೀಯವಾಗಿ ಕುಂಠಿತಗೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಉಭಯ ದಿಕ್ಕುಗಳಲ್ಲೂ ವಾಹನಗಳ ಉದ್ದ ಸಾಲು ನಿರ್ಮಾಣವಾಯಿತು. ಪಾಣೆಮಂಗಳೂರು ಸೇತುವೆಯಿಂದ ಎನ್.ಜಿ. ಸರ್ಕಲ್ ಮಾರ್ಗವಾಗಿ ಧರ್ಮಸ್ಥಳ ರಸ್ತೆಯ ಬೈಪಾಸ್ವರೆಗೆ ಕಾರುಗಳು, ಬಸ್ಗಳು, ಲಾರಿಗಳು ಹಾಗೂ ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸ್ಥಳೀಯರ ಪ್ರಕಾರ, ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಗುಂಡಿ ಉಂಟಾಗಿದ್ದು, ಇದೇ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಪರಿಣಾಮ ಕಚೇರಿಗಳಿಗೆ ತೆರಳುತ್ತಿದ್ದ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಟ್ರಾಫಿಕ್ನಲ್ಲಿ ಸಿಲುಕಿ ಪರದಾಡಬೇಕಾಯಿತು.
ಮಾಹಿತಿ ಪಡೆದ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ಹಂತ ಹಂತವಾಗಿ ಸಂಚರಿಸಲು ಅವಕಾಶ ಕಲ್ಪಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು. ರಸ್ತೆ ಗುಂಡಿಗಳನ್ನು ಶೀಘ್ರ ದುರಸ್ತಿಪಡಿಸಿ, ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಮಗಾರಿ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.





