08 August 2026 |

ಕಟೀಲು ಮೇಳದ ಬಗ್ಗೆ ನವೀನ್ ಸೂರಂಜೆ ಆರೋಪಗಳಿಗೆ ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟನೆ

  • 07 Aug 2026 01:45:29 PM

ಮಂಗಳೂರು: ಕಟೀಲು ಮೇಳದ ದೇವರನ್ನು ಬ್ರಾಹ್ಮಣರ ಮನೆಗಳಿಗೆ ಮಾತ್ರ ಕೊಂಡೊಯ್ಯಲಾಗುತ್ತದೆ ಹಾಗೂ ಮೇಳದ ಮೂಲಕ ಕೋಮುವಾದವನ್ನು ಹರಡಲಾಗುತ್ತಿದೆ ಎಂಬ ಪತ್ರಕರ್ತ ನವೀನ್ ಸೂರಂಜೆ ಅವರ ಆರೋಪಗಳಿಗೆ ಹರಿನಾರಾಯಣ ದಾಸ ಅಸ್ರಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

 

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಟೀಲು ಮೇಳದ ದೇವರನ್ನು ಯಾವ ಮನೆಗೆ ಕೊಂಡೊಯ್ಯಬೇಕು ಎಂಬುದನ್ನು ಜಾತಿಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಸ್ಯಾಹಾರ ಪದ್ಧತಿ, ಸಾತ್ವಿಕ ಆಚರಣೆ, ಪೂಜೆಗೆ ಅಗತ್ಯವಾದ ಶುದ್ಧಾಚಾರ ಸೇರಿದಂತೆ ಧಾರ್ಮಿಕ ಸಂಪ್ರದಾಯಗಳನ್ನು ಪರಿಗಣಿಸಿ ತೀರ್ಮಾನಿಸಲಾಗುತ್ತದೆ ಎಂದರು.

 

ಸಸ್ಯಾಹಾರ ಪಾಲಿಸುವ ಬ್ರಾಹ್ಮಣೇತರರ ಮನೆಗಳಲ್ಲಿಯೂ ಕಟೀಲು ದೇವರ ಪೂಜೆ ನಡೆಯುತ್ತದೆ. ನಾರಾಯಣಗುರು ಮಂದಿರಗಳಲ್ಲಿಯೂ ದೇವರ ಪೆಟ್ಟಿಗೆಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಪದ್ಧತಿ ಇದೆ ಎಂದು ಅವರು ತಿಳಿಸಿದರು.

 

ಇದೇ ವೇಳೆ, ಮಾಂಸಾಹಾರ ಸೇವಿಸುವ ಕುಟುಂಬಗಳಲ್ಲಿಯೂ ಪೂಜೆಯ ಸಮಯದಲ್ಲಿ ಅಗತ್ಯವಾದ ಶುದ್ಧಾಚಾರ ಪಾಲಿಸಿ, ಪ್ರತ್ಯೇಕ ವ್ಯವಸ್ಥೆ ಮಾಡಿದ ಬಳಿಕ ದೇವರ ಪೂಜೆ ನಡೆಸುವ ಸಂಪ್ರದಾಯವಿದೆ ಎಂದು ವಿವರಿಸಿದರು.

 

ಬ್ರಾಹ್ಮಣರ ಮನೆಯಾದರೂ ಶುದ್ಧಾಚಾರದ ನಿಯಮಗಳನ್ನು ಪಾಲಿಸದಿದ್ದರೆ ಅಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸುವುದಿಲ್ಲ. ಹೀಗಾಗಿ ಇದು ಜಾತಿ ಆಧಾರಿತ ಪದ್ಧತಿ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಅಸ್ರಣ್ಣ ಹೇಳಿದರು.

 

ಕಟೀಲು ಮೇಳ ಕೋಮುವಾದವನ್ನು ಉತ್ತೇಜಿಸುತ್ತದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದರು. ಕಟೀಲು ಮೇಳದಲ್ಲಿ ಪೌರಾಣಿಕ ಕಥೆಗಳನ್ನಷ್ಟೇ ಯಕ್ಷಗಾನದ ಮೂಲಕ ಪ್ರದರ್ಶಿಸಲಾಗುತ್ತದೆ. ಆ ಮೂಲಕ ಕೋಮುವಾದವನ್ನು ಹರಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

 

ಇದಲ್ಲದೆ, ಕಟೀಲು ಮೇಳದಲ್ಲಿ ಕಾರ್ಯನಿರ್ವಹಿಸುವ ಕಲಾವಿದರಲ್ಲಿ ಸುಮಾರು ಶೇ.50ರಷ್ಟು ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ ಎಂದು ಅವರು ಹೇಳಿದರು.