07 August 2026 |

ಬಿ.ಸಿ.ರೋಡ್ ಎನ್‌ಜಿ ಸರ್ಕಲ್‌ನಲ್ಲಿ ಅಪಘಾತ ದುರಂತ: ಚಿಕಿತ್ಸೆ ಫಲಕಾರಿಯಾಗದೆ ಇಬ್ಬರ ಸಾವು

  • 07 Aug 2026 11:46:36 AM

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಸಮೀಪ ಗುರುವಾರ (ಆಗಸ್ಟ್ 6) ಸಂಜೆ ಸಂಭವಿಸಿದ್ದ ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ಸ್ಕೂಟರ್ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

ಮೃತರನ್ನು ಆಕ್ಟಿವಾ ಸವಾರ ದಯಾನಂದ ಹಾಗೂ ಹಿಂಬದಿ ಸವಾರ ಯಶವಂತ್ ಕುಲಾಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಬಂಟ್ವಾಳ ತಾಲೂಕಿನ ನರಿಕೊಂಬು ಸಮೀಪದ ನೈಲ ನಿವಾಸಿಗಳಾಗಿದ್ದರು.

 

ಮೆಲ್ಕಾರ್ ಕಡೆಯಿಂದ ಲೊರೆಟ್ಟೊ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ, ಮಂಗಳೂರು ಕಡೆಯಿಂದ ಧರ್ಮಸ್ಥಳದತ್ತ ಸಾಗುತ್ತಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು. ಡಿಕ್ಕಿಯ ತೀವ್ರತೆಗೆ ದಯಾನಂದ ಹಾಗೂ ಯಶವಂತ್ ಕುಲಾಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶವಂತ್ ಕುಲಾಲ್ ಅವರು ಗಾಯಗಳ ತೀವ್ರತೆಯಿಂದ ಮೃತಪಟ್ಟಿದ್ದರು. ಬಳಿಕ ಚಿಕಿತ್ಸೆ ಮುಂದುವರಿದಿದ್ದ ದಯಾನಂದ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಅಪಘಾತ ದ್ವಿಮರಣ ದುರಂತವಾಗಿ ಮಾರ್ಪಟ್ಟಿದೆ.

 

ಮೃತ ಯಶವಂತ್ ಕುಲಾಲ್ ಅವರು ವೃತ್ತಿಯಲ್ಲಿ ಬಡಗಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿರಿಯ ಪುತ್ರಿಯ ಜನ್ಮದಿನವನ್ನು ಶುಕ್ರವಾರ ಆಚರಿಸಲು ಕುಟುಂಬದಲ್ಲಿ ಸಿದ್ಧತೆಗಳು ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿರುವುದು ಕುಟುಂಬದ ದುಃಖವನ್ನು ಇನ್ನಷ್ಟು ಹೆಚ್ಚಿಸಿದೆ.

 

ದಯಾನಂದ ಅವರು ಹುಲ್ಲು ಕತ್ತರಿಸುವ ಯಂತ್ರದ ಕೆಲಸ ಮಾಡುತ್ತಿದ್ದರು. ವಿಶೇಷವೆಂದರೆ, ಅವರ ತಾಯಿ ಕೇವಲ ಒಂದು ತಿಂಗಳ ಹಿಂದಷ್ಟೇ ನಿಧನರಾಗಿದ್ದರು.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ, ಬಂಟ್ವಾಳದ ಪಲ್ಲಮಜಲು ನಿವಾಸಿ 33 ವರ್ಷದ ಸಲ್ಮಾನ್ ಫಾರೂಕ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.