08 August 2026 |

ಮರಳು ಕೊರತೆಯಲ್ಲೇ ಅಂತ್ಯಗೊಂಡ ಋತು: ಕರಾವಳಿ ನಿರ್ಮಾಣ ಕ್ಷೇತ್ರಕ್ಕೆ ಮತ್ತೆ ಸಂಕಷ್ಟ

  • 07 Aug 2026 02:50:38 PM

ಮಂಗಳೂರು: ಕರಾವಳಿಯಲ್ಲಿ ಈ ಬಾರಿಯೂ ಮರಳುಗಾರಿಕೆ ಅವಧಿ ಮರಳು ಕೊರತೆಯ ನಡುವೆಯೇ ಅಂತ್ಯಗೊಂಡಿದೆ. ಇದರಿಂದ ನಿರಂತರ ನಾಲ್ಕನೇ ವರ್ಷವೂ ನಿರ್ಮಾಣ ಕ್ಷೇತ್ರಕ್ಕೆ ಅಗತ್ಯ ಪ್ರಮಾಣದ ಮರಳು ಲಭ್ಯವಾಗದೆ ಕಾಮಗಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

 

ಕಳೆದ ನಾಲ್ಕು ವರ್ಷಗಳಿಂದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಇಲ್ಲದ ಕಾರಣ, ನಾನ್‌ ಸಿಆರ್‌ಝಡ್ ಪ್ರದೇಶಗಳಲ್ಲಿ ಮಾತ್ರ ಮರಳು ತೆಗೆಯಲಾಗುತ್ತಿತ್ತು. ಆದರೆ ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಅಲ್ಲಿಯೂ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಅಕ್ಟೋಬರ್‌ವರೆಗೆ ಯಾವುದೇ ಮರಳುಗಾರಿಕೆ ನಡೆಯುವುದಿಲ್ಲ. ಮುಂದಿನ ಋತುವಿನಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

ಎಂ-ಸ್ಯಾಂಡ್‌ಗೆ ಹೆಚ್ಚಿದ ಬೇಡಿಕೆ

ನೈಸರ್ಗಿಕ ಮರಳಿನ ಬೆಲೆ ಏರಿಕೆಯಾಗಿರುವುದರ ಜೊತೆಗೆ ಗುಣಮಟ್ಟದ ಮರಳು ಸಿಗುವುದು ಕಷ್ಟವಾಗಿದೆ. ಹೆಚ್ಚಿನ ಹಣ ಪಾವತಿಸಿದರೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ಸಾಲ ಪಡೆದು ಮನೆ ನಿರ್ಮಿಸುತ್ತಿರುವವರು ಹಾಗೂ ವಿವಿಧ ಯೋಜನೆಗಳ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾದವರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕಾರಣದಿಂದ ಕಡಿಮೆ ದರದಲ್ಲಿ ದೊರೆಯುವ ಎಂ-ಸ್ಯಾಂಡ್ ಬಳಕೆಯತ್ತ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಹೆಚ್ಚು ಒಲವು ತೋರುತ್ತಿದ್ದಾರೆ.

 

ಸಿಆರ್‌ಝಡ್ ವ್ಯಾಪ್ತಿಯಲ್ಲೂ ಅವಕಾಶ ನೀಡುವಂತೆ ಒತ್ತಾಯ

ಮರಳು ಕೊರತೆ ಮತ್ತು ದುಬಾರಿ ದರದಿಂದ ನಿರ್ಮಾಣ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಸಾರ್ವಜನಿಕರಿಗೂ ಅಗತ್ಯ ಪ್ರಮಾಣದಲ್ಲಿ ಮರಳು ಸಿಗುತ್ತಿಲ್ಲ. ಜಿಲ್ಲೆಯ ನಾನ್‌ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಲಭ್ಯವಾಗುತ್ತಿರುವ ಕೆಲವೆಡೆಗಳ ಮರಳು ನಿರ್ಮಾಣ ಕಾರ್ಯಕ್ಕೆ ಸಮರ್ಪಕವಾಗಿಲ್ಲ. ಹೀಗಾಗಿ ಎಂ-ಸ್ಯಾಂಡ್ ಬಳಕೆ ಅನಿವಾರ್ಯವಾಗುತ್ತಿದೆ. ಸಿಆರ್‌ಝಡ್ ಪ್ರದೇಶದಲ್ಲಿಯೂ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ದಕ್ಷಿಣ ಕನ್ನಡ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅಭಿಪ್ರಾಯಪಟ್ಟಿದ್ದಾರೆ.

 

ಮರಳುಗಾರಿಕೆ ಪ್ರಮಾಣ

2024–25ರಲ್ಲಿ 90,190.44 ಮೆಟ್ರಿಕ್ ಟನ್, 2025–26ರಲ್ಲಿ 3,84,205.07 ಮೆಟ್ರಿಕ್ ಟನ್ ಹಾಗೂ 2026–27ರ ಮಾರ್ಚ್‌ನಿಂದ ಜೂನ್‌ವರೆಗೆ 1,01,832.94 ಮೆಟ್ರಿಕ್ ಟನ್ ಮರಳುಗಾರಿಕೆ ನಡೆದಿದೆ.

 

ಎಂ-ಸ್ಯಾಂಡ್ ಉತ್ಪಾದನೆ ಹೆಚ್ಚಳ

2024–25ರಲ್ಲಿ 1,18,895.48 ಮೆಟ್ರಿಕ್ ಟನ್, 2025–26ರಲ್ಲಿ 3,71,331.15 ಮೆಟ್ರಿಕ್ ಟನ್ ಹಾಗೂ 2026–27ರಲ್ಲಿ 1,56,318 ಮೆಟ್ರಿಕ್ ಟನ್ ಎಂ-ಸ್ಯಾಂಡ್ ಉತ್ಪಾದನೆಯಾಗಿದೆ. ಜಿಲ್ಲೆಯ ಬೇಡಿಕೆ ಪೂರೈಸಲು ಇತರ ಜಿಲ್ಲೆಗಳಿಂದಲೂ ಎಂ-ಸ್ಯಾಂಡ್ ಖರೀದಿಸಲಾಗುತ್ತಿದೆ. ಸರ್ಕಾರದ ಹೊಸ ನಿಯಮಗಳಡಿ ಎಂ-ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 32 ಮಂದಿ ಹೊಸ ಘಟಕಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ದಿಲೀಪ್ ತಿಳಿಸಿದ್ದಾರೆ.