13 August 2026 |

ವಿಮಾನದಲ್ಲಿ AC ಕೈಕೊಟ್ಟು ಉಸಿರುಗಟ್ಟುವ ವಾತಾವರಣ: SpiceJet ವಿರುದ್ಧ ಪ್ರಯಾಣಿಕರ ಪ್ರತಿಭಟನೆ

  • 12 Aug 2026 01:10:10 PM

ನವದೆಹಲಿ: ವಿಮಾನದ ಏರ್‌ಕಂಡೀಷನಿಂಗ್ ವ್ಯವಸ್ಥೆ ಕೈಕೊಟ್ಟ ಹಿನ್ನೆಲೆಯಲ್ಲಿ ದೆಹಲಿಯಿಂದ ಪುಣೆಗೆ ತೆರಳಬೇಕಿದ್ದ SpiceJet ವಿಮಾನದ ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

 

ಆಗಸ್ಟ್ 11ರಂದು ದೆಹಲಿಯಿಂದ ಪುಣೆಗೆ ತೆರಳಬೇಕಿದ್ದ SpiceJetನ SG 105 ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ವಿಮಾನದೊಳಗೆ ತಾಪಮಾನ ಹೆಚ್ಚಾಗಿ, ಪ್ರಯಾಣಿಕರು ತೀವ್ರ ಬಿಸಿಲು ಮತ್ತು ಅಸೌಕರ್ಯ ಅನುಭವಿಸಿದರು. 100ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನವನ್ನು ಮುಂದುವರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ. 

 

ವಿಶೇಷವಾಗಿ ವೃದ್ಧರು ಸೇರಿದಂತೆ ಕೆಲವು ಪ್ರಯಾಣಿಕರು ಬಿಸಿಲಿನ ವಾತಾವರಣದಿಂದ ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗಿದ್ದು, ವಿಮಾನದ AC ವ್ಯವಸ್ಥೆ ಸರಿಯಾಗುವವರೆಗೆ ಪ್ರಯಾಣ ಮುಂದುವರಿಸಬಾರದು ಎಂದು ಪ್ರಯಾಣಿಕರು ಒತ್ತಾಯಿಸಿದರು. 

 

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಯಿತು. ಘಟನೆಯಿಂದಾಗಿ ಪ್ರಯಾಣಿಕರು ಹಲವು ಗಂಟೆಗಳ ಕಾಲ ಅಸೌಕರ್ಯ ಅನುಭವಿಸಬೇಕಾಯಿತು.

 

ಈ ಕುರಿತು SpiceJet, “ಆಗಸ್ಟ್ 11ರಂದು ದೆಹಲಿಯಿಂದ ಪುಣೆಗೆ ತೆರಳಬೇಕಿದ್ದ SG 105 ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದ್ದು, ಬಳಿಕ ವಿಮಾನ ಪುಣೆಗೆ ತೆರಳಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ” ಎಂದು ತಿಳಿಸಿದೆ.