13 August 2026 |

ಗುಂಡಿಬಿದ್ದ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದ ಯುವತಿ; ಗೂಡ್ಸ್‌ ವಾಹನ ಹರಿದು ದಾರುಣ ಸಾವು

  • 13 Aug 2026 09:55:09 AM

ಬೆಂಗಳೂರು: ಕಚೇರಿಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 32 ವರ್ಷದ ಯುವತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಹೆಬ್ಬಗೋಡಿ ಅನಂತನಗರದಲ್ಲಿ ನಡೆದಿದೆ.

 

ಕೇರಳ ಮೂಲದ ಮೇಧಾ ಪೃಥ್ವಿರಾಜ್ (32) ಮೃತ ಯುವತಿ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಮೇಧಾ ಅವರು ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್‌ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಗುಂಡಿಬಿದ್ದಿದ್ದ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ.

 

ಕಾರಿನ ಹಠಾತ್ ಬ್ರೇಕ್‌ನಿಂದ ಬೈಕ್‌ ಸವಾರರು ನಿಯಂತ್ರಣ ಕಳೆದುಕೊಂಡಿದ್ದು, ಹಿಂಬದಿ ಕುಳಿತಿದ್ದ ಮೇಧಾ ಅವರು ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಗೂಡ್ಸ್‌ ವಾಹನ ಮೇಧಾ ಅವರ ಮೇಲೆ ಹರಿದಿದೆ.

 

ಅಪಘಾತದಲ್ಲಿ ಮೇಧಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಅವರನ್ನು ರಕ್ಷಿಸಲು ಸ್ಥಳೀಯರು ತಕ್ಷಣ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

 

ಮೇಧಾ ಅವರು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ತಮ್ಮ ಪತಿ ಎಸ್‌.ಎಲ್‌. ಆಕರ್ಷ್ ಹಾಗೂ ಪುಟ್ಟ ಮಗ ದಕ್ಷ್ ಆಕರ್ಷ್ ಅವರನ್ನು ಅಗಲಿದ್ದಾರೆ.

 

ಮೃತರ ತಾಯಿ ಉಷಾ ಅವರು ತರಿಯೋಡ್‌ನ ಗ್ರೀನ್ ಮೌಂಟ್ ಪಬ್ಲಿಕ್ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಅವರ ಸಹೋದರ ಗೌತಮ್ ಪೃಥ್ವಿರಾಜ್ ಪ್ರಸ್ತುತ ಪುದುಚೇರಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.

 

ಕಳಪೆ ರಸ್ತೆ, ಹಠಾತ್ ಬ್ರೇಕ್ ಹಾಗೂ ಹಿಂಬದಿಯಿಂದ ಬಂದ ವಾಹನ, ಈ ಘಟನೆ ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನೆಯಲ್ಲಿ ಹೆಚ್ಚಿನ ಎಚ್ಚರಿಕೆಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.