ಕಾಸರಗೋಡು: ಡಿಸೆಂಬರ್ 26ರಂದು ವಿವಾಹವಾಗಲು ಸಿದ್ಧತೆ ನಡೆಸುತ್ತಿದ್ದ ಬ್ಯಾಂಕ್ ಉದ್ಯೋಗಿಗಳಾದ ಯುವ ಜೋಡಿಯೊಂದು ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಕಾಸರಗೋಡಿನ ಪಳ್ಳಿಕ್ಕರ ನಿವಾಸಿ ಪಿ. ಅನುಶ್ರೀ (25) ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು.
ಅನುಶ್ರೀ ಅವರ ಸಾವಿನ ಸುದ್ದಿ ತಿಳಿದು ಕೆಲವೇ ಗಂಟೆಗಳ ಬಳಿಕ, ಬೆಳಗ್ಗೆ ಸುಮಾರು 10 ಗಂಟೆಗೆ ಅವರ ನಿಶ್ಚಿತಾರ್ಥವಾಗಿದ್ದ ಕಣ್ಣೂರು ಮೂಲದ ವಿ. ಅಮಲ್ (26) ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲು ನಿಲ್ದಾಣದ ಸಮೀಪದ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಮಲ್ ಅವರು ಎರ್ನಾಕುಲಂ ಎಂ.ಜಿ. ರೋಡ್‌ನ ಎಸ್‌ಬಿಐ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.
ಅನುಶ್ರೀ ಅವರು ಪಳ್ಳಿಕ್ಕರದ ಕೆ. ಚಂದ್ರನ್ ಮತ್ತು ರೀನಾ ದಂಪತಿಯ ಪುತ್ರಿಯಾಗಿದ್ದು, ಅಮಲ್ ಅವರು ಕಣ್ಣೂರಿನ ಅಂಬಲತಟ್ಟುವಿನ ಸುಧಾಕರನ್ ಮತ್ತು ಅನಿತಾ ದಂಪತಿಯ ಪುತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಕಳೆದ ಶನಿವಾರ ಇಬ್ಬರೂ ಕಾಸರಗೋಡಿನ ಮನೆಗೆ ಬಂದಿದ್ದು, ಭಾನುವಾರ ಸಂಜೆ ಅಲ್ಲಿಂದ ಹಿಂದಿರುಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಮಲ್ ಅವರ ಸ್ನೇಹಿತ ಶಾಯೋನ್ ನೀಡಿದ ಮಾಹಿತಿ ಆಧರಿಸಿ ಎರ್ನಾಕುಲಂ ಟೌನ್ ನಾರ್ತ್ ಪೊಲೀಸರು ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಅನುಶ್ರೀ ಅವರ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಹುಣಸೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ನಡೆದ ಈ ಎರಡು ಸಾವುಗಳು ಎರಡೂ ಕುಟುಂಬಗಳಿಗೆ ತೀವ್ರ ಆಘಾತ ಉಂಟುಮಾಡಿವೆ.





