ಉಪ್ಪಳ: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಉಪ್ಪಳದಲ್ಲಿ ನಡೆದಿದೆ.
ಪೆರಿಂಗಡಿಯ ಅಲಿ ಮತ್ತು ದುಲೈಕಾ ದಂಪತಿಯ ಪುತ್ರ ಅಬೂಬಕರ್ ಅಸಾನ್ (13) ಮೃತ ವಿದ್ಯಾರ್ಥಿ. ಮಂಗಲ್ಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ, ಮಂಗಳವಾರ ಸಂಜೆ ಸುಮಾರು 5 ಗಂಟೆಗೆ ಮನೆಯ ಸಮೀಪದಲ್ಲಿರುವ ಕೆರೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದನು.
ಸ್ನೇಹಿತರೆಲ್ಲರೂ ಸ್ನಾನ ಮುಗಿಸಿ ಮನೆಗೆ ಮರಳಿದ ಬಳಿಕವೂ ಅಬೂಬಕರ್ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಸುತ್ತಮುತ್ತ ಹುಡುಕಾಟ ಆರಂಭಿಸಿದರು. ಆದರೆ ಬಾಲಕನ ಸುಳಿವು ಸಿಗಲಿಲ್ಲ.
ನಂತರ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಅಬೂಬಕರ್ ಕೆರೆಯ ನೀರಿನಲ್ಲಿ ಮುಳುಗಿರುವುದು ಗೊತ್ತಾಯಿತು. ತಕ್ಷಣ ಸ್ಥಳೀಯರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು.
ತಡರಾತ್ರಿಯ ವೇಳೆಗೆ ಬಾಲಕನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಅಬೂಬಕರ್ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





