ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರ ವಾಹನವನ್ನು ತಡೆದು, ನಿಂದಿಸಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಾರ್ಕಳ ತಾಲೂಕಿನ ಈದು ನಿವಾಸಿ ಶೈಕ್ ಮುಕ್ತಾರ್ (50) ನೀಡಿದ ದೂರಿನ ಪ್ರಕಾರ, ಕೆಲಸದ ನಿಮಿತ್ತ ಪರಿಚಯಸ್ಥರ ಅಪ್ರಾಪ್ತ ವಯಸ್ಸಿನ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಹಾಸನದತ್ತ ಪ್ರಯಾಣಿಸುತ್ತಿದ್ದರು. ಕೊಕ್ಕಡ ಕಾಪಿನಬಾಗಿಲು ಬಳಿ ತಲುಪಿದ ವೇಳೆ ಕೆಲವರು ಕಾರನ್ನು ತಡೆದು ನಿಲ್ಲಿಸಿ, ವಾಹನದಲ್ಲಿದ್ದ ಬಾಲಕಿಯ ಕುರಿತು ವಿಚಾರಿಸಿದ್ದಾರೆ. ಬಳಿಕ ಶೈಕ್ ಮುಕ್ತಾರ್ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 106/2026ರಂತೆ BNSನ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಷ್(23), ದಿನೇಶ್(45), ಪೂರ್ಣಕ್ಷ. ಬಿ(40), ಸೂರಜ್(25) ಹಾಗೂ ರಂಜಿತ್ ಬಂಡಾರಿ(29) ಈ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯ ತಾಯಿಯಿಂದ ಪ್ರತಿದೂರು
ಇದೇ ಘಟನೆ ಕುರಿತು ಅಪ್ರಾಪ್ತ ಬಾಲಕಿಯ ತಾಯಿ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಶೈಕ್ ಮುಕ್ತಾರ್ (52) ಎಂಬವರು ತನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಾಯಿಯ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ZERO FIR 03/2026ರಂತೆ BNS ಕಲಂ 137(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡೂ ದೂರುಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





