14 August 2026 |

ಕುಕ್ಕೆ ಕ್ಷೇತ್ರದಲ್ಲಿ 5 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಅನ್ನಪ್ರಸಾದ: ₹54 ಕೋಟಿ ವೆಚ್ಚದ ಭವನಕ್ಕೆ ಯೋಜನೆ

  • 14 Aug 2026 11:02:06 AM

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಇನ್ನಷ್ಟು ಉತ್ತಮ ಸೌಲಭ್ಯ ಒದಗಿಸುವ ಉದ್ದೇಶದಿಂದ ₹54 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಅನ್ನಪ್ರಸಾದ ಭವನ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ.

 

ಲೋಕೋಪಯೋಗಿ ಇಲಾಖೆಯ ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಕಟ್ಟಡದ ನಕ್ಷೆ ಹಾಗೂ ಅಂದಾಜು ಸಿದ್ಧಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.

 

ಪ್ರಸ್ತುತ ದೇವಸ್ಥಾನದ ಅನ್ನಪ್ರಸಾದ ಭವನದಲ್ಲಿ ಒಂದೇ ಬಾರಿ ಸುಮಾರು 800 ಮಂದಿ ಊಟ ಮಾಡಲು ಅವಕಾಶವಿದೆ. ಆದರೆ ಪ್ರತಿದಿನ ಸರಾಸರಿ 20 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ವಿಶೇಷ ದಿನಗಳು ಹಾಗೂ ಹೆಚ್ಚಿನ ಭಕ್ತರ ಆಗಮನದ ಸಂದರ್ಭಗಳಲ್ಲಿ ಈ ಸಂಖ್ಯೆ 30 ಸಾವಿರದವರೆಗೂ ಏರಿಕೆಯಾಗುತ್ತದೆ.

 

ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಒಂದೇ ಸ್ಥಳದಲ್ಲಿ ಅನ್ನಪ್ರಸಾದ ವಿತರಿಸಲು ಅನುಕೂಲವಾಗುವಂತೆ ಹೊಸ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ನೂತನ ಕಟ್ಟಡದಲ್ಲಿ ಏಕಕಾಲಕ್ಕೆ ಸುಮಾರು 5 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ತಿಳಿಸಿದ್ದಾರೆ.

 

ಯೋಜನೆಯ ಪ್ರಕಾರ ನೆಲಮಾಳಿಗೆಯಲ್ಲಿ ಉಗ್ರಾಣ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ. ನೆಲ ಮಹಡಿಯಲ್ಲಿ ಆಧುನಿಕ ಅಡುಗೆಮನೆ ಹಾಗೂ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರ ಸುಗಮ ಸಂಚಾರಕ್ಕಾಗಿ ಲಿಫ್ಟ್, ಇಳಿಜಾರು ಮಾರ್ಗ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಯೋಜಿಸಲಾಗಿದೆ.

 

₹600 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆ

ಕುಕ್ಕೆ ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸುಮಾರು ₹600 ಕೋಟಿ ಮೊತ್ತದ ಯೋಜನೆ ರೂಪಿಸಿದೆ. ಈ ಯೋಜನೆಯ ಮೇಲ್ವಿಚಾರಣೆಗಾಗಿ ಮುಜರಾಯಿ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಾಗಲೇ ಸುಮಾರು ₹119 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.

 

ಕ್ಷೇತ್ರಕ್ಕೆ ಆಗಮಿಸುವ ಭಕ್ತರ ವಸತಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 800ರಿಂದ 900 ಕೊಠಡಿಗಳನ್ನು ನಿರ್ಮಿಸುವ ಯೋಜನೆಯೂ ರೂಪಿಸಲಾಗಿದೆ.

 

‘ಸುತ್ತು ಪೌಳಿ’ ನವೀಕರಣಕ್ಕೆ ₹32 ಕೋಟಿ

ಕುಕ್ಕೆ ದೇವಸ್ಥಾನದ ಶತಮಾನಗಳಷ್ಟು ಹಳೆಯ ‘ಸುತ್ತು ಪೌಳಿ’ಯನ್ನು ನವೀಕರಿಸಲು ಸುಮಾರು ₹32 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ರಥಬೀದಿ ಮಾರುಕಟ್ಟೆಯ ಎರಡೂ ಬದಿಗಳಲ್ಲಿ ಕಾಶಿ ಮಾದರಿಯ ಸಾಂಪ್ರದಾಯಿಕ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯೂ ಇದೆ.