16 August 2026 |

ಕಳಪೆ ಚಿಕನ್ ಮಾರಾಟ ಆರೋಪ: ಮಂಗಳೂರಿನ ಆಹಾರ ಮಳಿಗೆಗೆ ಅಧಿಕಾರಿಗಳ ದಾಳಿ

  • 16 Aug 2026 09:47:46 AM

ಮಂಗಳೂರು: ಕಳಪೆ ಗುಣಮಟ್ಟದ ಚಿಕನ್ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದರ ಆಹಾರ ಮಳಿಗೆ ಮೇಲೆ ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

 

ನಗರದ ನಿವಾಸಿಯೊಬ್ಬರು ಈ ಮಳಿಗೆಯಿಂದ ಚಿಕನ್ ಪೆರಿ ಪೆರಿ ಆರ್ಡರ್ ಮಾಡಿದ್ದರು. ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದರು. ಸಚಿವರ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

 

ಪರಿಶೀಲನೆ ಸಂದರ್ಭದಲ್ಲಿ ಮಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಚಿಕನ್ ಗುಣಮಟ್ಟದ ಬಗ್ಗೆ ಅನುಮಾನಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಮಾಂಸದ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಇದೇ ವೇಳೆ, ಸುಮಾರು ನಾಲ್ಕು ತಿಂಗಳ ಹಿಂದೆ ಪ್ಯಾಕ್ ಮಾಡಲಾಗಿದ್ದ ಚಿಕನ್ ಕೂಡ ಮಳಿಗೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಮಳಿಗೆಯ ಸ್ವಚ್ಛತಾ ವ್ಯವಸ್ಥೆಯಲ್ಲಿಯೂ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ತಾತ್ಕಾಲಿಕವಾಗಿ ಮಳಿಗೆಯನ್ನು ಮುಚ್ಚಲಾಗಿದೆ.

 

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ದೃಢಪಟ್ಟರೆ ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.