ಜಮೀನು, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳಗಳು ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕೇಳಿಬರುತ್ತವೆ. ಆದರೆ, ಇಲ್ಲೊಂದು ಆಸ್ತಿ ವಿವಾದವು ಮಾತ್ರ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ದುರಂತಕ್ಕೆ ತಿರುಗಿದೆ.
ಐವರು ಮಕ್ಕಳ ಭವಿಷ್ಯಕ್ಕಾಗಿ ಜಮೀನು ಮಾರಾಟಕ್ಕೆ ವಿರೋಧಿಸಿದ್ದ ಮಹಿಳೆಯೊಬ್ಬರು ಕೊನೆಗೆ ತನ್ನದೇ ಪತಿಯಿಂದ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪತಿ ಇಸ್ರಾರ್‌ನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ನಸೀನ್ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಹಲವು ಭಾಗಗಳಲ್ಲಿ, ಖಾಸಗಿ ಅಂಗಗಳಲ್ಲಿಯೂ ವಿದ್ಯುತ್ ಸ್ಪರ್ಶದಿಂದ ಉಂಟಾದ ಗಂಭೀರ ಸುಟ್ಟ ಗಾಯಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಇಸ್ರಾರ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಕುಟುಂಬದ ಹಿರಿಯರಿಂದ ಬಂದಿದ್ದ ಜಮೀನನ್ನು ಮಾರಾಟ ಮಾಡಲು ಪತ್ನಿ ಒಪ್ಪದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ.
ನಸೀನ್ ತಮ್ಮ ಐವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜಮೀನು ಮಾರಾಟಕ್ಕೆ ವಿರೋಧಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸುಮಾರು 13 ವರ್ಷಗಳ ಹಿಂದೆ ನಸೀನ್ ಮತ್ತು ಇಸ್ರಾರ್ ವಿವಾಹವಾಗಿದ್ದು, ದಂಪತಿಗೆ ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾರೆ.
ಜಮೀನು ಮಾರಾಟದ ವಿಚಾರದಲ್ಲಿ ಇಸ್ರಾರ್ ಪತ್ನಿಗೆ ಪದೇಪದೇ ಬೆದರಿಕೆ ಹಾಕುತ್ತಿದ್ದ ಹಾಗೂ ಹಿಂಸೆ ನೀಡುತ್ತಿದ್ದ ಎಂದು ನಸೀನ್ ಕುಟುಂಬದವರು ಆರೋಪಿಸಿದ್ದಾರೆ. ಇತ್ತೀಚೆಗೆ ನಸೀನ್ ಗಾಯಗೊಂಡಿದ್ದರೂ, ತಾನು ಎದುರಿಸುತ್ತಿದ್ದ ಕಿರುಕುಳದ ಬಗ್ಗೆ ಕುಟುಂಬದವರಿಗೆ ಸಂಪೂರ್ಣವಾಗಿ ಮಾಹಿತಿ ನೀಡಿರಲಿಲ್ಲ ಎಂದು ಆಕೆಯ ಸಹೋದರಿ ಹಸೀನ್ ಜಹಾನ್ ತಿಳಿಸಿದ್ದಾರೆ.
ನಸೀನ್ ಅವರ ಮಾವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





