ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆಂದು ಆರೋಪಿಸಿ ವಶಕ್ಕೆ ಪಡೆದಿರುವ 21 ಬಾಂಗ್ಲಾದೇಶಿ ಪ್ರಜೆಗಳನ್ನು ಗಡೀಪಾರು ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆ.23ರಂದು ಮಂಗಳೂರಿನಿಂದ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗುತ್ತಿದ್ದು, ಬಳಿಕ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.
ಕಳೆದ ಜು.9ರಂದು ಸುರತ್ಕಲ್ ಪೊಲೀಸರು ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಮೇಲೆ ದಾಳಿ ನಡೆಸಿ ಎಂಟು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದರು. ಇವರು ಬಾಂಗ್ಲಾದೇಶದ ರಾಜ್‌ಶಾಹಿ ವಿಭಾಗದ ಗೋಅಗರಿ ತಾಲೂಕಿನವರು ಎಂದು ತನಿಖೆಯಿಂದ ತಿಳಿದುಬಂದಿತ್ತು. ಬಂಧನದ ಬಳಿಕ ಅವರನ್ನು ಪೊಲೀಸ್ ನಿಗಾದಲ್ಲಿ ಇರಿಸಲಾಗಿತ್ತು.
ಇದಾದ ನಂತರ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕಲ್ ಹಾಗೂ ಕೆಪಿಟಿ ಸಮೀಪದ ಎರಡು ಪ್ರತ್ಯೇಕ ನಿರ್ಮಾಣ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ನಾಲ್ವರು ಅಪ್ರಾಪ್ತರು ಸೇರಿದಂತೆ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೂಡುಬಿದಿರೆ ಮತ್ತು ಮೂಲ್ಕಿ ಪ್ರದೇಶಗಳಲ್ಲಿಯೂ ತಲಾ ಒಬ್ಬ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಲಾಗಿತ್ತು.
ಬಂಧಿತರ ಬಳಿಯಿಂದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ, ಜನನ ಪ್ರಮಾಣಪತ್ರ ಸೇರಿದಂತೆ ಕುಟುಂಬಕ್ಕೆ ಸಂಬಂಧಿಸಿದ ವಿವಿಧ ದಾಖಲೆಗಳು ಪತ್ತೆಯಾಗಿದ್ದವು.
ಪೊಲೀಸ್ ಎಸ್ಕಾರ್ಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ
21 ಮಂದಿಯನ್ನು ಸುಮಾರು 30 ಪೊಲೀಸರ ಭದ್ರತೆಯಲ್ಲಿ ಬಸ್ ಹಾಗೂ ರೈಲು ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ದು, ಅಲ್ಲಿಂದ ಪಶ್ಚಿಮ ಬಂಗಾಳದ ಮಾಲ್ದಾಕ್ಕೆ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮುರ್ಷಿದಾಬಾದ್ ಮಾರ್ಗವಾಗಿ ಭಾರತಕ್ಕೆ ಪ್ರವೇಶಿಸಿದ್ದರೆಂದು ತಿಳಿದುಬಂದಿರುವ ಇವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಆ.23ರಂದು ಮಂಗಳೂರಿನಿಂದ ಹೊರಡಲಿರುವ ಪೊಲೀಸ್ ತಂಡವು ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದು ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಲಿದೆ. ಆ.26ರಂದು ಗಡಿ ಭದ್ರತಾ ಪಡೆ ವತಿಯಿಂದ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವ ಕ್ರಮ ನಡೆಯಲಿದೆ. ಕಳೆದ ವರ್ಷವೂ ಮಂಗಳೂರಿನಿಂದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಗಡೀಪಾರು ಮಾಡಲಾಗಿತ್ತು.





