24 August 2026 |

ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ: ಮೂರು ಜಾನುವಾರುಗಳ ರಕ್ಷಣೆ, ಚಾಲಕ ವಶಕ್ಕೆ

  • 23 Aug 2026 03:02:29 PM

ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಪುತ್ತೂರು ನಗರ ಠಾಣಾ ಪೊಲೀಸರು ಜಿಡೆಕಲ್ಲು ಬಳಿ ತಡೆದು ಪರಿಶೀಲನೆ ನಡೆಸಿದ್ದು, ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಮಹಮ್ಮದ್ ಜಬ್ಬಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಆನಡ್ಕದಿಂದ ಪಡೀಲ್ ಕಡೆಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ. ಅವರಿಗೆ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಚಿಕ್ಕಮುನ್ನೂರು ಗ್ರಾಮದ ಜಿಡೆಕಲ್ಲು ಬಳಿ KA 19 D 0948 ನೋಂದಣಿಯ ಪಿಕ್‌ಅಪ್ ವಾಹನವನ್ನು ತಡೆದು ತಪಾಸಣೆ ನಡೆಸಿದರು.

 

ಈ ವೇಳೆ ವಾಹನದೊಳಗೆ ಮೂರು ಜಾನುವಾರುಗಳನ್ನು ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಚಾಲಕ ಮಹಮ್ಮದ್ ಜಬ್ಬಾರ್‌ನನ್ನು ವಿಚಾರಿಸಿದಾಗ, ಶಾಂತಿಗೋಡು ಗ್ರಾಮದ ಅಶೋಕ್ ಎಂಬವರಿಂದ ಜಾನುವಾರುಗಳನ್ನು ಖರೀದಿಸಿರುವುದಾಗಿ ಹಾಗೂ ಅಗತ್ಯ ಪರವಾನಗಿ ಇಲ್ಲದೆ ವಧೆ ಮಾಡುವ ಉದ್ದೇಶದಿಂದ ಅವುಗಳನ್ನು ಸಾಗಿಸುತ್ತಿದ್ದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪೊಲೀಸರು ಮೂರು ಜಾನುವಾರುಗಳು, ಪಿಕ್‌ಅಪ್ ವಾಹನ ಹಾಗೂ ಮಹಮ್ಮದ್ ಜಬ್ಬಾರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 101/2026ರಂತೆ ಪ್ರಕರಣ ದಾಖಲಾಗಿದೆ. ಪ್ರಾಣಿ ಹಿಂಸಾ ಕಾಯ್ದೆಯ ಕಲಂ 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯ ಕಲಂ 4, 5, 12 ಹಾಗೂ IMV Act ಕಲಂ 66 R/w 192(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.