24 August 2026 |

ಮನೆಯಿಂದ ಹೊರಬರಲಾಗದ 87 ವರ್ಷದ ವೃದ್ಧೆಗೆ ಮನೆ ಬಾಗಿಲಿಗೇ ಆಧಾರ್ ಸೇವೆ

  • 23 Aug 2026 05:58:36 PM

ಬಂಟ್ವಾಳ: ವಯೋಸಹಜ ಸಮಸ್ಯೆಯಿಂದ ಮನೆಯಿಂದ ಹೊರಬರಲು ಸಾಧ್ಯವಾಗದ 87 ವರ್ಷದ ವೃದ್ಧೆಯೊಬ್ಬರಿಗೆ ಅಂಚೆ ಇಲಾಖೆಯ ಸಿಬ್ಬಂದಿ ಅವರ ಮನೆಗೇ ತೆರಳಿ ಆಧಾರ್ ನವೀಕರಣ ಸೇವೆ ಒದಗಿಸಿದ್ದಾರೆ. ಸುಮಾರು 1 ಕಿ.ಮೀ. ದೂರದ ಗುಡ್ಡ ಪ್ರದೇಶಕ್ಕೆ ಕಂಪ್ಯೂಟರ್ ಸೇರಿದಂತೆ ಅಗತ್ಯ ಉಪಕರಣಗಳನ್ನು ಹೊತ್ತುಕೊಂಡು ತೆರಳಿ ಸೇವೆ ನೀಡಿರುವುದು ಗಮನ ಸೆಳೆದಿದೆ.

 

ಅಮ್ಮಾಡಿ ಗ್ರಾಮದ ಜೂಲಿಯಾನ ಎಂಬ ವೃದ್ಧೆಯ ಆಧಾರ್ ವಿವರಗಳನ್ನು ನವೀಕರಿಸಬೇಕಾಗಿತ್ತು. ಆಧಾರ್ ಅಪ್‌ಡೇಟ್ ಆಗದ ಕಾರಣ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ತೊಂದರೆ ಎದುರಾಗಿತ್ತು. ಆದರೆ ವೃದ್ಧಾಪ್ಯದಿಂದಾಗಿ ಅವರು ಸ್ವತಃ ಆಧಾರ್ ಸೇವಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಅವರ ಮನೆಗೆ ವಾಹನ ಸಂಚಾರಕ್ಕೂ ರಸ್ತೆ ಸಂಪರ್ಕದ ಸಮಸ್ಯೆ ಇತ್ತು.

 

ಈ ವಿಚಾರವನ್ನು ಗಮನಿಸಿದ ಮೋಡಂಕಾಪು ಅಂಚೆ ಶಾಖಾ ಕಚೇರಿಯ ಅಂಚೆ ವಿತರಕಿ ಸವಿತಾ ಅವರು ಅಂಚೆ ಇಲಾಖೆಯ ಆಧಾರ್ ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಪುತ್ತೂರು ವಿಭಾಗದ ಸಿಸ್ಟಮ್ ಆಡಳಿತಾಧಿಕಾರಿ ನೂತನ ಬಂಗೇರ ಅವರು ವೃದ್ಧೆಯ ಕುಟುಂಬದವರ ನೆರವಿನೊಂದಿಗೆ ಅಗತ್ಯ ಉಪಕರಣಗಳನ್ನು ಹೊತ್ತುಕೊಂಡು ಅವರ ಮನೆಗೆ ತೆರಳಿದರು.

 

ಸ್ಥಳದಲ್ಲೇ ಜೂಲಿಯಾನ ಅವರ ಆಧಾರ್‌ನ ಬಯೋಮೆಟ್ರಿಕ್ ಹಾಗೂ ಮೊಬೈಲ್ ಸಂಖ್ಯೆ ನವೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಅಗತ್ಯವಿರುವವರಿಗೆ ಅವರಿರುವ ಸ್ಥಳದಲ್ಲೇ ಸೇವೆ ಒದಗಿಸಿದ ಅಂಚೆ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಇಲಾಖೆಯ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಅಗತ್ಯವಿರುವವರ ಮನೆ ಬಾಗಿಲಿಗೇ ಸೇವೆ ನಡೆಯಲು ಸಾಧ್ಯವಾಗದ ವೃದ್ಧರು, ವಿಶೇಷ ಚೇತನರು ಹಾಗೂ ಆಶ್ರಮಗಳಲ್ಲಿ ವಾಸಿಸುವವರಿಗಾಗಿ ಅಂಚೆ ಇಲಾಖೆಯ ಆಧಾರ್ ಸೇವಾ ವಿಭಾಗವು ಮನೆ ಮತ್ತು ಸಂಸ್ಥೆಗಳಿಗೆ ತೆರಳಿ ಸೇವೆ ನೀಡುತ್ತಿದೆ. ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಈವರೆಗೆ 100ಕ್ಕೂ ಹೆಚ್ಚು ಸ್ಥಳಗಳಿಗೆ ತೆರಳಿ ಆಧಾರ್ ಸೇವೆ ಒದಗಿಸಲಾಗಿದೆ ಎಂದು ನೂತನ ಬಂಗೇರ ತಿಳಿಸಿದ್ದಾರೆ.