ಬಂಟ್ವಾಳ: ಈದ್ ಮಿಲಾದ್ ಅಂಗವಾಗಿ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಬಂಟ್ವಾಳ ತಾಲೂಕಿನ ಸಜೀಪಮೂಡದ ಬೇಂಕ್ಯ ಆಟೊ ಪಾರ್ಕ್ (ರಿ) ಸುಭಾಷ್ ನಗರ ವತಿಯಿಂದ ಸಿಹಿ ತಿಂಡಿ ಹಾಗೂ ತಂಪು ಪಾನೀಯ ವಿತರಿಸಲಾಯಿತು.
ಮೊಹಿಯ್ಯದ್ದೀನ್ ಜುಮ್ಮಾ ಮಸೀದಿ ಕೊಳಕೆಯಿಂದ ಸಿರಾಜುಲ್ ಹುದಾ ಮಸೀದಿ, ಸುಭಾಷ್ ನಗರಕ್ಕೆ ಪ್ರತಿವರ್ಷ ನಡೆಯುವ ಈದ್ ಮಿಲಾದ್ ಮೆರವಣಿಗೆಯ ಅಂಗವಾಗಿ ಈ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೇಂಕ್ಯ ಆಟೊ ಪಾರ್ಕ್ ವತಿಯಿಂದ ಸತತ ಮೂರನೇ ವರ್ಷ ಈ ಸೇವೆ ನಡೆಯುತ್ತಿದೆ.
ಸರ್ವ ಧರ್ಮಗಳ ಹಬ್ಬಗಳ ಸಂದರ್ಭದಲ್ಲಿಯೂ ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಸಹಕಾರದೊಂದಿಗೆ ಕೈಜೋಡಿಸುವುದು ಬೇಂಕ್ಯ ಆಟೊ ಪಾರ್ಕ್‌ನ ವಿಶೇಷತೆಯಾಗಿದೆ. ಆಟೊ ಚಾಲಕರು ತಮ್ಮ ದುಡಿಮೆಯಿಂದ ಸಾಧ್ಯವಾದಷ್ಟು ಮೊತ್ತವನ್ನು ಒಟ್ಟುಗೂಡಿಸಿ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ Team Zirba ಕೂಡ ಬೇಂಕ್ಯ ಆಟೊ ಪಾರ್ಕ್‌ನ ವಿವಿಧ ಯೋಜನೆಗಳಿಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ತಂಡದ ಹಲವು ಸದಸ್ಯರು ಆಟೊ ಪಾರ್ಕ್‌ನ ಸದಸ್ಯರಾಗಿರುವುದರಿಂದ ಸೇವಾ ಕಾರ್ಯಗಳಿಗೆ ಅವರ ಕೊಡುಗೆಯೂ ಗಮನಾರ್ಹವಾಗಿದೆ.
ದುಡಿಮೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗುವ ಉದ್ದೇಶವನ್ನು ಬೇಂಕ್ಯ ಆಟೊ ಪಾರ್ಕ್ ಹೊಂದಿದೆ. “ದುಡಿಮೆಯೇ ನಮ್ಮ ಧರ್ಮ, ಮೊದಲು ಮಾನವನಾಗು” ಎಂಬ ಸಂದೇಶದೊಂದಿಗೆ ಸಾಮಾಜಿಕ ಸೌಹಾರ್ದತೆ ಬೆಳೆಸುವ ಕಾರ್ಯಗಳಿಗೆ ಮುಂದೆಯೂ ಕೈಜೋಡಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.





