ಪುತ್ತೂರು: ಮಾಡೂರು ಕಾವು ಪ್ರದೇಶದಲ್ಲಿ ನಡೆದ ಓಮ್ಮಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಅಂತರ್ ರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
2026ರ ಜೂನ್ 19ರಿಂದ 20ರ ನಡುವಿನ ಅವಧಿಯಲ್ಲಿ ಓಮ್ಮಿ ಕಾರು ಕಳ್ಳತನವಾಗಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 94/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಪಿಎಸ್‌ಐಗಳಾದ ಗುಣಪಾಲ ಜೆ. ಮತ್ತು ಸುಷ್ಮಾ ಜಿ. ಭಂಡಾರಿ ನೇತೃತ್ವದ ತಂಡವು ಕೇರಳ ಮತ್ತು ತಮಿಳುನಾಡಿನಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮೊಹಮ್ಮದ್ ಆಸೀಕ್ (25), ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ. (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು ₹2.5 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಓಮ್ಮಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು ₹1 ಲಕ್ಷ ಮೌಲ್ಯದ ಕೆಟಿಎಂ ಬೈಕ್ ಕೂಡ ಪೊಲೀಸರ ವಶವಾಗಿದೆ.
ವಿಚಾರಣೆ ವೇಳೆ ಮಾಡೂರು ಕಾವಿನಿಂದ ಓಮ್ಮಿ ಕಾರನ್ನು ಕದ್ದು ಕೇರಳಕ್ಕೆ ಸಾಗಿಸಿ, ನಂತರ ತಮಿಳುನಾಡಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ತಮಿಳುನಾಡಿನಲ್ಲಿ ಈ ಕದ್ದ ಕಾರನ್ನು ಆಂಬುಲೆನ್ಸ್ ಆಗಿ ಮಾರ್ಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.





