27 August 2026 |

ಎರಡು ವಾರಗಳ ಬಳಿಕ ಹೊರಬಂದ ದೇವಸ್ಥಾನದ CCTV ದೃಶ್ಯ; ಕರ್ತವ್ಯನಿರತ ಮಹಿಳಾ ಪಿಎಸ್‌ಐಗೆ ಶಾಸಕ ಪುತ್ರಿಯ ಕಪಾಳಮೋಕ್ಷ

  • 27 Aug 2026 10:59:59 AM

ಮಂಡ್ಯ: ಸುಮಾರು ಎರಡು ವಾರಗಳ ಹಿಂದೆ ದೇವಸ್ಥಾನದಲ್ಲಿ ನಡೆದಿದ್ದ ಮಹಿಳಾ ಪಿಎಸ್‌ಐ ಹಾಗೂ ಬಿಜೆಪಿ ಶಾಸಕನ ಪುತ್ರಿಯ ನಡುವಿನ ಗಲಾಟೆಯ CCTV ದೃಶ್ಯ ಇದೀಗ ವೈರಲ್ ಆಗಿದ್ದು, ಘಟನೆ ಮತ್ತೆ ಚರ್ಚೆಗೆ ಬಂದಿದೆ.

 

ಆಗಸ್ಟ್ 12ರಂದು ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಭೀಮ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಈ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಬಿ. ಪಾಟೀಲ್ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ನಡುವೆ ಮಾತಿನ ಚಕಮಕಿ ನಡೆದಿತ್ತು.

 

ದೇವಸ್ಥಾನದ ಗರ್ಭಗುಡಿ ಪ್ರವೇಶಿಸುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದೀಗ ಹೊರಬಂದಿರುವ CCTV ದೃಶ್ಯದಲ್ಲಿ ಐಶ್ವರ್ಯ ಅವರು ಪಿಎಸ್‌ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಬಳಿಕ ಸವಿತಾ ಕೂಡ ಪ್ರತಿಕ್ರಿಯಿಸಿದ್ದು, ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಇಬ್ಬರನ್ನು ಪ್ರತ್ಯೇಕಿಸಿದ್ದಾರೆ.

 

ಘಟನೆಗೆ ಸಂಬಂಧಿಸಿದಂತೆ ಸವಿತಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಐಶ್ವರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ಐಶ್ವರ್ಯ ಕೂಡ ಪಿಎಸ್‌ಐ ವಿರುದ್ಧ ಪ್ರತಿ ದೂರು ನೀಡಿದ್ದು, ತಮ್ಮೊಂದಿಗೆ ಪೊಲೀಸರು ದುರ್ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

 

ಈ ನಡುವೆ CCTV ದೃಶ್ಯ ಸಾರ್ವಜನಿಕವಾಗಿ ಹರಿದಾಡುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ಗಮನ ಸೆಳೆದಿದೆ. ಎರಡೂ ಕಡೆಯ ದೂರುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಘಟನೆ ನಡೆದ ಸುಮಾರು ಎರಡು ವಾರಗಳ ಬಳಿಕ CCTV ದೃಶ್ಯ ಮುನ್ನೆಲೆಗೆ ಬಂದಿರುವುದರಿಂದ, ದೇವಸ್ಥಾನದಲ್ಲಿ ನಡೆದಿದ್ದ ಈ ಗಲಾಟೆ ಇದೀಗ ಮತ್ತೆ ಚರ್ಚೆಯ ವಿಷಯವಾಗಿದೆ.