ಮಂಗಳೂರು: ಭಾರತದ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಮಂಗಳೂರು ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದ್ದು, ಚೌಗಲೆ ಶಿಪ್‌ಯಾರ್ಡ್ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ.
ಜರ್ಮನಿಯ ಶಿಪ್ಪಿಂಗ್ ಸಂಸ್ಥೆ ಲಿಯೋನ್‌ಹಾರ್ಟ್ ಆ್ಯಂಡ್ ಬ್ಲೂಂಬರ್ಗ್‌ಗಾಗಿ ನಿರ್ಮಿಸಲಾಗುತ್ತಿರುವ 8,500 ಡಿಡಬ್ಲ್ಯುಟಿ ಸಾಮರ್ಥ್ಯದ ಸರಕು ಹಡಗುಗಳ ಪೈಕಿ ಎರಡನೇ ಹಡಗನ್ನು ಆ.26ರಂದು ಹಸ್ತಾಂತರಿಸಲಾಯಿತು. ‘ಎಂವಿ ಹನ್ಸಾ ಅನ್ಹೋಲ್ಟ್’ ಹೆಸರಿನ ಈ ಹಡಗನ್ನು ಚೌಗಲೆ ಶಿಪ್‌ಯಾರ್ಡ್ ನಿರ್ಮಿಸಿದೆ.
ಹಡಗು ಹಸ್ತಾಂತರದ ಬೆನ್ನಲ್ಲೇ ಇದೇ ಸಾಮರ್ಥ್ಯದ ಮತ್ತಷ್ಟು ಸರಕು ಹಡಗುಗಳನ್ನು ನಿರ್ಮಿಸುವ ಸಂಬಂಧ ಲಿಯೋನ್‌ಹಾರ್ಟ್ ಆ್ಯಂಡ್ ಬ್ಲೂಂಬರ್ಗ್ ಜತೆ ಹೊಸ ಒಪ್ಪಂದಕ್ಕೂ ಸಹಿ ಮಾಡಲಾಗಿದೆ. ಇದರಿಂದ ಶಿಪ್‌ಯಾರ್ಡ್ ಮತ್ತು ಅಂತಾರಾಷ್ಟ್ರೀಯ ಶಿಪ್ಪಿಂಗ್ ಸಂಸ್ಥೆಯ ನಡುವಿನ ವ್ಯವಹಾರಿಕ ಸಂಬಂಧ ಮತ್ತಷ್ಟು ಬಲಗೊಂಡಿದೆ.
ಇದರ ಮುಂದುವರಿದ ಭಾಗವಾಗಿ, ಆ.28ರಂದು ಇದೇ ಸಂಸ್ಥೆಗಾಗಿ ನಿರ್ಮಿಸಲಾಗುತ್ತಿರುವ 8,500 ಡಿಡಬ್ಲ್ಯುಟಿ ಸರಣಿಯ ಮೂರನೇ ಹಡಗನ್ನು ಜಲಾವತರಣ ಮಾಡಲಾಯಿತು.
ಸತತವಾಗಿ ಹಡಗು ನಿರ್ಮಾಣ ಮತ್ತು ಹಸ್ತಾಂತರ ಕಾರ್ಯಗಳು ನಡೆಯುತ್ತಿರುವುದು ಭಾರತೀಯ ಶಿಪ್‌ಯಾರ್ಡ್‌ಗಳ ಸಾಮರ್ಥ್ಯದ ಬಗ್ಗೆ ಜಾಗತಿಕ ಹಡಗು ಮಾಲೀಕರ ವಿಶ್ವಾಸ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ದೇಶದ ಸಾಗರೋದ್ಯಮ ಉತ್ಪಾದನಾ ಸಾಮರ್ಥ್ಯ ವೃದ್ಧಿಗೂ ಇದು ಉತ್ತೇಜನ ನೀಡುವ ಬೆಳವಣಿಗೆಯಾಗಿದೆ.





