31 August 2026 |

ಧಾರವಾಡಕ್ಕೆ ಬಂದ ರೈಲಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಅತ್ಯಾಚಾರ, ಕೊಲೆ ಶಂಕೆ

  • 31 Aug 2026 10:36:18 AM

ಧಾರವಾಡ: ಸೋಲಾಪುರದಿಂದ ಧಾರವಾಡಕ್ಕೆ ಆಗಮಿಸಿದ ರೈಲಿನ ಮಹಿಳಾ ಬೋಗಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

 

ಶನಿವಾರ ರಾತ್ರಿ ಮಹಾರಾಷ್ಟ್ರದ ಸೋಲಾಪುರದಿಂದ ರೈಲು ಧಾರವಾಡದತ್ತ ಹೊರಟಿತ್ತು. ಬೆಳಗ್ಗೆ ಧಾರವಾಡ ತಲುಪಿದ ಬಳಿಕ ರೈಲ್ವೆ ಸಿಬ್ಬಂದಿ ಬೋಗಿಯನ್ನು ಸ್ವಚ್ಛಗೊಳಿಸಲು ತೆರಳಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಷಯ ತಿಳಿದು ರೈಲ್ವೆ ಪೊಲೀಸರು ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

 

ರೈಲು ಸೋಲಾಪುರದಿಂದ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದ ವೇಳೆಯೇ ಮಹಿಳೆಯನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ರೈಲಿನ ಕೊನೆಯ ಭಾಗದಲ್ಲಿರುವ ಮಹಿಳಾ ಬೋಗಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಮಹಿಳೆಯ ಗುರುತು, ಸಾವಿಗೆ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.