ಮಂಗಳೂರು: ಮೊಬೈಲ್ ಬಳಕೆಗೆ ಸಂಬಂಧಿಸಿದ ವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್ ಸಮೀಪ ಭಾನುವಾರ ರಾತ್ರಿ ನಡೆದಿದೆ. ಜಗಳದ ವೇಳೆ ತಮ್ಮ ಚಾಕುವಿನಿಂದ ಇರಿದ ಪರಿಣಾಮ ಅಣ್ಣ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು 40 ವರ್ಷದ ಅಡಿವೆಪ್ಪ ಎಂದು ಗುರುತಿಸಲಾಗಿದ್ದು, ಅವರ 36 ವರ್ಷದ ತಮ್ಮ ರಾಜು ಈ ಪ್ರಕರಣದ ಆರೋಪಿಯಾಗಿದ್ದಾನೆ. ಇಬ್ಬರೂ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರು. ತಾಯಿಯೊಂದಿಗೆ ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದರೆ, ಅಣ್ಣ-ತಮ್ಮಂದಿರು ಕೂಲಿ ಕೆಲಸ ಮಾಡುತ್ತಿದ್ದರು.
ಅಡಿವೆಪ್ಪ ಮತ್ತು ರಾಜು ಇಬ್ಬರಿಗೂ ಮದ್ಯಪಾನದ ಚಟವಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಸುಮಾರು 10.30ರಿಂದ 11 ಗಂಟೆಯ ನಡುವೆ ಮೊಬೈಲ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿ ರಾಜು ಚಾಕುವಿನಿಂದ ಅಡಿವೆಪ್ಪ ಅವರಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿ ಮುಚ್ಚಿಕೊಂಡು ಮನೆಗೆ ಮರಳಿದ ತಾಯಿ, ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರನ್ನು ವೆಸ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ದೊರೆಯುವ ಮುನ್ನವೇ ಅವರು ಮೃತಪಟ್ಟಿದ್ದರು.
ಮಾಹಿತಿ ಪಡೆದ ಉರ್ವ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.





