ಬೆಳ್ಳಾರೆ: ಎಲಿಮಲೆ–ಪೈಲಾರು–ಚೊಕ್ಕಾಡಿ–ಬೆಳ್ಳಾರೆ–ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ವೊಂದು ರಸ್ತೆ ಬದಿಗೆ ಜಾರಿ ಮೆಸ್ಕಾಂನ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಸಿದ್ದ ಕಣಿಯಲ್ಲಿ ಸಿಲುಕಿದ ಘಟನೆ ಆ.31ರ ಬೆಳಗ್ಗೆ ನಡೆದಿದೆ.
ರಸ್ತೆ ಬದಿಗೆ ಜಾರಿದ ಪರಿಣಾಮ ಬಸ್‌ನ ಒಂದು ಚಕ್ರ ಕೇಬಲ್ ಅಳವಡಿಸಲಾಗಿದ್ದ ಕಣಿಯಲ್ಲಿ ಹೂತುಹೋಗಿದೆ. ಇದರಿಂದ ಬಸ್ ಮುಂದಕ್ಕೆ ಸಾಗಲಾಗದೆ ಅಲ್ಲಿಯೇ ನಿಂತಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು.
ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಏಕೈಕ ಸರ್ಕಾರಿ ಬಸ್ ಇದಾಗಿರುವುದರಿಂದ, ಈ ಘಟನೆ ಬಳಿಕ ಈ ಮಾರ್ಗದ ನಿತ್ಯ ಪ್ರಯಾಣಿಕರಿಗೆ ಸಮಸ್ಯೆ ಎದುರಾಯಿತು. ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಪ್ರತಿದಿನ ಬಸ್ ಅವಲಂಬಿಸಿರುವ ಹಲವು ಮಂದಿ ಸಂಚಾರದ ಅಡಚಣೆಯಿಂದ ಪರದಾಡುವಂತಾಯಿತು.





