ಮಂಗಳೂರು: ನಗರದಲ್ಲಿ ಆಟೋರಿಕ್ಷಾ ಪ್ರಯಾಣದ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ. ದೂರಕ್ಕೆ ಕನಿಷ್ಠ ₹40 ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಸಂಚರಿಸಲು ಅವಕಾಶವಿದೆ.
ನಿಗದಿತ ಆರಂಭಿಕ ದೂರವನ್ನು ದಾಟಿದ ಬಳಿಕ ಪ್ರತಿ ಹೆಚ್ಚುವರಿ ಕಿ.ಮೀ.ಗೆ ₹20 ಪಾವತಿಸಬೇಕು. ಈ ದರವೂ ಗರಿಷ್ಠ ಮೂವರು ಪ್ರಯಾಣಿಕರಿಗೆ ಅನ್ವಯಿಸುತ್ತದೆ.
ಕಾಯುವಿಕೆ ಶುಲ್ಕ: ಆಟೋದಲ್ಲಿ ಮೊದಲ 10 ನಿಮಿಷಗಳವರೆಗೆ ಕಾಯುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. 10 ನಿಮಿಷಗಳ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ ವಿಧಿಸಬಹುದು.
ಲಗೇಜ್ ಸಾಗಣೆಗೆ ಶುಲ್ಕ: ಸರಕು ಸಾಗಿಸುವ ಸಂದರ್ಭದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕ ಆಟೋದಲ್ಲಿ ಜತೆಗಿರುವುದು ಕಡ್ಡಾಯ. ಮೊದಲ 20 ಕೆ.ಜಿ. ಲಗೇಜ್‌ಗೆ ಶುಲ್ಕ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಸರಕಿಗೆ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹5 ಶುಲ್ಕ ಪಡೆಯಲು ಅವಕಾಶವಿದೆ.
ರಾತ್ರಿ ಪ್ರಯಾಣ: ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮಾತ್ರ ಸಾಮಾನ್ಯ ಪ್ರಯಾಣ ದರದ ಒಂದೂವರೆ ಪಟ್ಟು ಮೊತ್ತವನ್ನು ಹೆಚ್ಚುವರಿಯಾಗಿ ಪಡೆಯಬಹುದು.
ಪರಿಷ್ಕೃತ ದರಗಳು ಪ್ರಯಾಣಿಕರು ಮತ್ತು ಆಟೋ ಚಾಲಕರಿಗೆ ಅನ್ವಯವಾಗಲಿದ್ದು, ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರಯಾಣಿಕರಿಂದ ವಸೂಲಿ ಮಾಡುವಂತಿಲ್ಲ.





