10 September 2026 |

ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಮಂಗಳೂರಿಗೆ ತಲುಪಿದ ವಂದೇ ಭಾರತ್: ಎರಡನೇ ಟ್ರಯಲ್ ರನ್ ಯಶಸ್ವಿ

  • 10 Sep 2026 04:19:45 PM

ಮಂಗಳೂರು: ಬೆಂಗಳೂರು–ಮಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಹಂತದ ಪರೀಕ್ಷಾರ್ಥ ಸಂಚಾರ ಗುರುವಾರ (ಸೆ.10) ನಡೆಯಿತು. ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ ನಡೆದ ಈ ಟ್ರಯಲ್ ರನ್‌ನಲ್ಲಿ ರೈಲು ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ಮುಂಚಿತವಾಗಿ ಮಂಗಳೂರು ತಲುಪಿರುವುದು ಗಮನ ಸೆಳೆದಿದೆ.

 

ರೈಲ್ವೆ ಮಂಡಳಿಯ ಸೂಚನೆಯಂತೆ 16 ಬೋಗಿಗಳ ವಂದೇ ಭಾರತ್ ರೈಲಿನ ಎರಡನೇ ಸಮಯ ಪರೀಕ್ಷಾರ್ಥ ಸಂಚಾರವನ್ನು ನಡೆಸಲಾಯಿತು. ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ಹೊರಟ ರೈಲು, ನಿಗದಿತ 2.50ರ ಬದಲು ಸುಮಾರು 2 ಗಂಟೆಯ ವೇಳೆಗೆ ಮಂಗಳೂರು ಜಂಕ್ಷನ್ ತಲುಪಿದೆ ಎಂದು ವರದಿಯಾಗಿದೆ. ಅಂದರೆ, ಬೆಂಗಳೂರು–ಮಂಗಳೂರು ಮಾರ್ಗವನ್ನು ಸುಮಾರು 7 ಗಂಟೆ 10 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. 

 

ಸೆಪ್ಟೆಂಬರ್ 5ರಂದು ನಡೆದ ಮೊದಲ ಪೂರ್ಣ ಮಾರ್ಗದ ಟ್ರಯಲ್ ರನ್‌ನಲ್ಲಿ ರೈಲು ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ವರೆಗೆ ಸಂಚರಿಸಿತ್ತು. ಆ ಪ್ರಯೋಗದಲ್ಲಿ ಮಾರ್ಗದ ವೇಗ, ವಿಭಾಗವಾರು ಪ್ರಯಾಣದ ಸಮಯ ಹಾಗೂ ವಿಶೇಷವಾಗಿ ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ವಿಭಾಗದ ಕಾರ್ಯಾಚರಣೆಯನ್ನು ಪರಿಶೀಲಿಸಲಾಗಿತ್ತು.

 

ಎರಡನೇ ಟ್ರಯಲ್‌ನಲ್ಲಿ ರೈಲಿನ ವೇಗ ಮತ್ತು ಮಾರ್ಗದ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಶೀಲಿಸುವ ಉದ್ದೇಶ ಹೊಂದಲಾಗಿತ್ತು. ಪಶ್ಚಿಮ ಘಟ್ಟದ ಕಠಿಣ ತಿರುವುಗಳು, ಏರು-ಇಳಿಜಾರುಗಳು ಹಾಗೂ ವೇಗದ ನಿರ್ಬಂಧಗಳ ನಡುವೆಯೂ ಕಡಿಮೆ ಅವಧಿಯಲ್ಲಿ ಪ್ರಯಾಣ ಪೂರ್ಣಗೊಳಿಸಿರುವುದು ರೈಲ್ವೆ ಅಧಿಕಾರಿಗಳ ಗಮನ ಸೆಳೆದಿದೆ.

 

ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್‌ನ ನಿಯಮಿತ ಸಂಚಾರ ಆರಂಭವಾದರೆ, ಎರಡೂ ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ ಅಂತಿಮ ವೇಳಾಪಟ್ಟಿ, ನಿಲ್ದಾಣಗಳು, ಪ್ರಯಾಣದ ಅವಧಿ ಮತ್ತು ಸೇವೆ ಆರಂಭಿಸುವ ದಿನಾಂಕವನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಖಚಿತವಾಗಲಿದೆ.

 

ಕರಾವಳಿ ಕರ್ನಾಟಕದ ಜನರು ಬಹುಕಾಲದಿಂದ ನಿರೀಕ್ಷಿಸುತ್ತಿರುವ ಈ ರೈಲು ಸೇವೆಯ ಆರಂಭಕ್ಕೆ ಇಂದಿನ ಎರಡನೇ ಟ್ರಯಲ್ ರನ್ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.