11 September 2026 |

ಬೃಹತ್ ಗಣಪತಿ ಮೂರ್ತಿ ಬಿದ್ದು ಯುವಕ ಸಾವು: ಸಿರವಾರದಲ್ಲಿ ನಡೆದ ಘಟನೆ!

  • 11 Sep 2026 01:58:04 PM

ಸಿರವಾರ (ರಾಯಚೂರು): ಗಣೇಶೋತ್ಸವದ ಸಿದ್ಧತೆಯ ನಡುವೆ ಸಂಭವಿಸಿದ ದುರ್ಘಟನೆಯಲ್ಲಿ 27 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

 

ಹೈದರಾಬಾದ್‌ನಿಂದ ಬೃಹತ್ ಗಣಪತಿ ಮೂರ್ತಿಯನ್ನು ಸಿರವಾರದತ್ತ ಸಾಗಿಸುತ್ತಿದ್ದ ವೇಳೆ ಸಮೀಪದ ಅತ್ತನೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಎತ್ತರದ ಗಣಪತಿ ಮೂರ್ತಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೂರ್ತಿ ಏಕಾಏಕಿ ಕೆಳಗೆ ಬಿದ್ದಿದೆ. ಈ ವೇಳೆ ಅದರ ಕೆಳಗೆ ಸಿಲುಕಿದ ಪ್ರೇಮಕುಮಾರ (27) ಗಂಭೀರವಾಗಿ ಗಾಯಗೊಂಡಿದ್ದರು.

 

ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯೆ ಪ್ರೇಮಕುಮಾರ ಮೃತಪಟ್ಟಿದ್ದಾರೆ.

 

ಘಟನೆ ಕುರಿತು ಮಾಹಿತಿ ಪಡೆದ ಸಿಪಿಐ ಶಶಿಕಾಂತ ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣೇಶೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ದುರಂತದಿಂದ ಸಿರವಾರದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.