ಪುತ್ತೂರು: ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ಪೇಟೆಯತ್ತಲೂ ಹೆಜ್ಜೆ ಇಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸೆ.11ರ ನಸುಕಿನ ಜಾವ ಪುತ್ತೂರು ಬೈಪಾಸ್ ರಸ್ತೆಯ ದುಗ್ಗಮ್ಮ–ದೇರಣ್ಣ ಹಾಲ್ ಸಮೀಪ ಎರಡು ಕಾಡುಕೋಣಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಮುಂಜಾನೆ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ರಸ್ತೆಯಲ್ಲೇ ಕಾಡುಕೋಣಗಳು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾಡುಕೋಣಗಳು ಜನವಸತಿ ಪ್ರದೇಶದತ್ತ ಆಗಮಿಸಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಹಾಗೂ ನೀರಿನ ಹುಡುಕಾಟದಲ್ಲಿ ಕಾಡುಪ್ರಾಣಿಗಳು ಅರಣ್ಯ ಪ್ರದೇಶದಿಂದ ಹೊರಬಂದು ಜನವಸತಿ ಪ್ರದೇಶಗಳತ್ತ ಬರುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪೇಟೆ ಪ್ರದೇಶದಲ್ಲೂ ಕಾಡುಕೋಣಗಳ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ, ಅವುಗಳ ಸಂಚಾರದ ಬಗ್ಗೆ ನಿಗಾ ವಹಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಡುಕೋಣಗಳು ಮತ್ತೆ ಪೇಟೆಯತ್ತ ಬಾರದಂತೆ ಅವುಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ಸೂಕ್ತ ನಿಗಾ ವಹಿಸುವ ಅಗತ್ಯವಿದೆ.





