13 September 2026 |

ಚಂಡಮಾರುತಗಳಿಲ್ಲದೆ ಕರಾವಳಿಯಲ್ಲಿ ಮಳೆಯ ಕೊರತೆ

  • 12 Sep 2026 12:26:11 PM

ಮಂಗಳೂರು: ಅರಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗುವ ಚಂಡಮಾರುತಗಳು ಸಾಮಾನ್ಯವಾಗಿ ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಗೆ ಕಾರಣವಾಗುತ್ತವೆ. ಆದರೆ ಈ ವರ್ಷ ಇಂತಹ ಚಂಡಮಾರುತಗಳ ಚಟುವಟಿಕೆ ಕಂಡುಬರದಿರುವುದು ಮಳೆಯ ಪ್ರಮಾಣದ ಮೇಲೂ ಪರಿಣಾಮ ಬೀರಿದೆ.

 

ಪೂರ್ವ ಮುಂಗಾರು ಅವಧಿಯಿಂದಲೇ ಮಳೆ ದುರ್ಬಲವಾಗಿದ್ದು, ಇದೀಗ ಮುಂಗಾರು ಋತುವಿನಲ್ಲೂ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಸಾಮಾನ್ಯವಾಗಿ ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳು ಮತ್ತು ಹವಾಮಾನ ವ್ಯವಸ್ಥೆಗಳು ಮಳೆ ಹೆಚ್ಚಿಸಲು ನೆರವಾಗುತ್ತವೆ. ಆದರೆ ಈ ಬಾರಿ ಇದುವರೆಗೆ ಒಂದೂ ಚಂಡಮಾರುತ ರೂಪುಗೊಂಡಿಲ್ಲ.

 

ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಯಾವುದೇ ಸೂಚನೆಯೂ ಸದ್ಯಕ್ಕೆ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲೂ ಭಾರಿ ಮಳೆಯ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

“ಈ ಬಾರಿ ಮುಂಗಾರು ಅವಧಿಯಲ್ಲಿ ರಾಜ್ಯದ ವ್ಯಾಪ್ತಿಯಲ್ಲಿ ಯಾವುದೇ ಚಂಡಮಾರುತ ಉಂಟಾಗಿಲ್ಲ. ಸದ್ಯದಲ್ಲಿಯೂ ಅಂತಹ ಬೆಳವಣಿಗೆಯ ಮುನ್ಸೂಚನೆ ಇಲ್ಲ. ಇದರಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತಕ್ಷಣ ಬಿರುಸಿನ ಮಳೆ ಬೀಳುವ ಸಾಧ್ಯತೆ ಕಡಿಮೆ,” ಎಂದು ಐಎಂಡಿ ಅಧಿಕಾರಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.