19 September 2026 |

ಮಂಗಳೂರಿನ ಮೀನುಗಾರಿಕಾ ಧಕ್ಕೆಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ; ಅಧಿಕಾರಿಗಳಿಗೆ ಖಡಕ್ ಸೂಚನೆ

  • 19 Sep 2026 11:29:00 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಬೆಳಗ್ಗೆ ನಗರದ ಮೀನುಗಾರಿಕಾ ಧಕ್ಕೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು.

 

ಈ ವೇಳೆ ಮೀನುಗಾರರ ಸಮಸ್ಯೆಗಳು ಹಾಗೂ ಧಕ್ಕೆಯಲ್ಲಿನ ವ್ಯಾಪಾರ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡ ಸಿಎಂ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ದಾಗಿ ತಿಳಿಸಿದರು. ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಇತ್ತೀಚೆಗೆ ತಮ್ಮನ್ನು ಭೇಟಿಯಾಗಿ ಹಲವು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ನೇರವಾಗಿ ಬಂದು ಪರಿಶೀಲನೆ ನಡೆಸಿರುವುದಾಗಿ ಹೇಳಿದರು.

 

ಧಕ್ಕೆಯ ಚಟುವಟಿಕೆ ಸ್ಥಗಿತಕ್ಕೆ ಸಿಎಂ ಆಕ್ರೋಶ

ತಮ್ಮ ದಿಢೀರ್ ಭೇಟಿಯ ವೇಳೆ ಮೀನುಗಾರಿಕಾ ಧಕ್ಕೆಯಲ್ಲಿ ವ್ಯಾಪಾರ ಹಾಗೂ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

 

ಚಟುವಟಿಕೆಗಳು ಏಕೆ ಸ್ಥಗಿತಗೊಂಡಿವೆ ಎಂಬುದು ತನಗೆ ಸ್ಪಷ್ಟವಾಗಿಲ್ಲ ಎಂದು ಹೇಳಿದ ಅವರು, ಅಧಿಕಾರಿಗಳಿಂದಲೇ ಈ ರೀತಿಯ ಪರಿಸ್ಥಿತಿ ಉಂಟಾಗಿದ್ದರೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಅಧಿಕಾರಿಗಳ ತಪ್ಪಿನಿಂದಾಗಿ ವ್ಯವಹಾರಕ್ಕೆ ತೊಂದರೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಅದೇ ದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

 

ಮೀನು ವ್ಯಾಪಾರ ನಿರಂತರವಾಗಿ ನಡೆಯುವುದು ಅಗತ್ಯ. ದೇಶದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಮಂಗಳೂರಿಗೆ ಬರುತ್ತಾರೆ. ಮೀನು ವಹಿವಾಟಿನಲ್ಲಿ ಸ್ವಲ್ಪ ವಿಳಂಬವಾದರೂ ಮೀನು ಹಾಳಾಗಿ ವ್ಯಾಪಾರಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಸಿಎಂ ಹೇಳಿದರು.

 

ಸಚಿವ ಸಂಪುಟ ಸಭೆಯಲ್ಲಿಯೂ ಮೀನುಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ ಅವರು, ಧಕ್ಕೆಯಲ್ಲಿ ಸ್ಥಳೀಯರಿಗೆ ಅನುಕೂಲವಾಗುವ ವಾತಾವರಣ ನಿರ್ಮಾಣವಾಗಬೇಕು. ಸಣ್ಣ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರು.

 

ಮೀನುಗಾರಿಕೆ ಕರಾವಳಿ ಭಾಗದ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದ್ದು, ವಿವಿಧ ವರ್ಗದ ಜನರು ಪರಸ್ಪರ ಸೌಹಾರ್ದದಿಂದ ಕೆಲಸ ಮಾಡುವ ಮೂಲಕ ಈ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.