22 September 2026 |

ಆರು ತಿಂಗಳ ಬಳಿಕ ಮಂಗಳೂರು–ಕುವೈತ್ ನೇರ ವಿಮಾನ ಸೇವೆ ಪುನರಾರಂಭ

  • 22 Sep 2026 01:45:02 PM

ಮಂಗಳೂರು: ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ವಾಯು ಸಂಚಾರದಲ್ಲಿ ವ್ಯತ್ಯಯ ಉಂಟಾದ ಬಳಿಕ ಸ್ಥಗಿತಗೊಂಡಿದ್ದ ಮಂಗಳೂರು–ಕುವೈತ್ ನೇರ ವಿಮಾನ ಸೇವೆ ಇದೀಗ ಮತ್ತೆ ಆರಂಭವಾಗುವ ನಿರೀಕ್ಷೆ ಮೂಡಿದೆ.

 

ಫೆಬ್ರವರಿ 28ರ ಬಳಿಕ ಉಂಟಾದ ಪ್ರಾದೇಶಿಕ ಪರಿಸ್ಥಿತಿಯ ಪರಿಣಾಮ ಮಂಗಳೂರು ಸೇರಿದಂತೆ ಹಲವು ಭಾರತೀಯ ನಗರಗಳಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರ ಪರಿಣಾಮ ಮಂಗಳೂರು–ಕುವೈತ್ ನೇರ ವಿಮಾನ ಸಂಪರ್ಕವೂ ಸ್ಥಗಿತಗೊಂಡಿತ್ತು.

 

ಇದೀಗ ಸುಮಾರು ಆರು ತಿಂಗಳ ಬಳಿಕ ಈ ಮಾರ್ಗದಲ್ಲಿ ಮತ್ತೆ ನೇರ ವಿಮಾನ ಸೇವೆ ಲಭ್ಯವಾಗಲಿದೆ. Air India Express ತನ್ನ ಅಧಿಕೃತ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಮಂಗಳೂರು (IXE)–ಕುವೈತ್ ಸಿಟಿ (KWI) ಮಾರ್ಗಕ್ಕೆ ಅಕ್ಟೋಬರ್ 2026ರ ದಿನಾಂಕಗಳಿಗೆ ಟಿಕೆಟ್‌ಗಳನ್ನು ಪ್ರದರ್ಶಿಸುತ್ತಿದೆ. ಅಕ್ಟೋಬರ್ 6 ಮತ್ತು 9 ಸೇರಿದಂತೆ ಹಲವು ದಿನಗಳ ಪ್ರಯಾಣಕ್ಕೆ ಟಿಕೆಟ್ ಲಭ್ಯವಿರುವುದು ಕಂಡುಬಂದಿದೆ. 

 

ವಿಮಾನ ವೇಳಾಪಟ್ಟಿ ಮಾಹಿತಿಯ ಪ್ರಕಾರ, ಅಕ್ಟೋಬರ್ 27, 2026ರಿಂದ ಮಂಗಳೂರು–ಕುವೈತ್ ಮಾರ್ಗದಲ್ಲಿ ನೇರ ಸೇವೆ ಆರಂಭವಾಗುವ ಸಾಧ್ಯತೆ ಇದೆ. ವಾರದ ಹಲವು ದಿನಗಳಲ್ಲಿ Air India Express ನೇರ ವಿಮಾನಗಳನ್ನು ನಿರ್ವಹಿಸುವ ವೇಳಾಪಟ್ಟಿ ಪ್ರಕಟವಾಗಿದೆ. 

 

ಕುವೈತ್‌ನಲ್ಲಿರುವ ಕರಾವಳಿ ಕರ್ನಾಟಕದ ಅನಿವಾಸಿ ಭಾರತೀಯರು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಯಾಣಿಕರಿಗೆ ಈ ನೇರ ವಿಮಾನ ಸಂಪರ್ಕ ಪುನರಾರಂಭವಾಗುತ್ತಿರುವುದು ಅನುಕೂಲವಾಗಲಿದೆ.

 

ವಿಮಾನ ಟಿಕೆಟ್‌ಗಳ ಲಭ್ಯತೆ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಮೊದಲು ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕ ಹಾಗೂ ಸಮಯವನ್ನು ಪರಿಶೀಲಿಸುವುದು ಸೂಕ್ತ.