ಮಂಗಳೂರು: ನಗರದ ಎಮ್ಮೆಕೆರೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮದ ವೇಳೆ ಕಟ್ಟಡದ ಮೊದಲ ಮಹಡಿಯ ಪ್ಯಾರಪಿಟ್ ಗೋಡೆ ಕುಸಿದು ಬಿದ್ದ ಪರಿಣಾಮ 16 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಹಳೆಅಂಗಡಿ ನಿವಾಸಿ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರಾಮಲಕ್ಷ್ಮಿ ಹಾಲ್‌ನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ನೆಲ ಮಹಡಿಯಲ್ಲಿ ನಿಂತಿದ್ದ ಶಮಾಜ್ ಅವರ ಮೇಲೆ ಮೇಲಿನಿಂದ ಗೋಡೆಯ ಒಂದು ಭಾಗ ಬಿದ್ದಿದೆ ಎನ್ನಲಾಗಿದೆ.
ಘಟನೆಯಲ್ಲಿ ಸುರಿಂಜೆ ನಿವಾಸಿ ಮೊಹಮ್ಮದ್ ಶನಾನ್ (18), ಅಡ್ಯಾರ್‌ನ ಹನೀಫ್ (23), ಕಸ್ಟಾ ಬೆಂಗ್ರೆಯ ಮೊಹಮ್ಮದ್ ಶಕೀಲ್ ಹುಸೇನ್ (18) ಹಾಗೂ ಕಾವೂರಿನ ಗಾಂಧಿನಗರ ನಿವಾಸಿ ದಾವೂದ್ ಫರ್ಸೀನ್ ಅಹ್ಮದ್ (18) ಗಾಯಗೊಂಡಿದ್ದಾರೆ.
ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರಿಂದ ರಾಮಲಕ್ಷ್ಮಿ ಹಾಲ್‌ನಲ್ಲಿ ಜನದಟ್ಟಣೆ ಉಂಟಾಗಿತ್ತು. ಹಾಲ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದ ಕೆಲವರು ಹೊರಭಾಗದ ಕಾರಿಡಾರ್‌ನಲ್ಲಿ ನಿಂತಿದ್ದರು ಎನ್ನಲಾಗಿದೆ.
ಈ ವೇಳೆ ಕೆಲವು ವಿದ್ಯಾರ್ಥಿಗಳು ದುರ್ಬಲ ಸ್ಥಿತಿಯಲ್ಲಿದ್ದ ಪ್ಯಾರಪಿಟ್ ಗೋಡೆಗೆ ಒರಗಿ ನಿಂತಿದ್ದರು ಎನ್ನಲಾಗಿದ್ದು, ವಿದ್ಯಾರ್ಥಿಗಳ ಭಾರದಿಂದ ಗೋಡೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





