ಮಂಗಳೂರು: ಕುಡಿಯುವ ನೀರಿನಲ್ಲಿ ಇರುವ ಸೂಕ್ಷ್ಮಾಣು ಜೀವಿಗಳನ್ನು ನಿಖರವಾಗಿ ಪತ್ತೆಹಚ್ಚಲು ಅಗತ್ಯವಿರುವ ಬಯಾಲಾಜಿಕಲ್ ಪ್ರಯೋಗಾಲಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ನೀರಿನ ಗುಣಮಟ್ಟವನ್ನು ಸಂಪೂರ್ಣವಾಗಿ ಪರಿಶೀಲಿಸುವಲ್ಲಿ ತೊಂದರೆ ಎದುರಾಗುತ್ತಿದೆ.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ವ್ಯಾಪ್ತಿಯಲ್ಲಿ ಮಂಗಳೂರು, ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಮೂರು ಕೆಮಿಕಲ್ ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಯೋಗಾಲಯಗಳಲ್ಲಿ ನೀರಿನಲ್ಲಿರುವ ವಿವಿಧ ರಾಸಾಯನಿಕ ಅಂಶಗಳ ಪ್ರಮಾಣವನ್ನು ಪರೀಕ್ಷಿಸಲು ಸಾಧ್ಯವಿದೆ. ಆದರೆ ಸೂಕ್ಷ್ಮಾಣು ಜೀವಿಗಳ ಪ್ರಮಾಣವನ್ನು ನಿಖರವಾಗಿ ನಿರ್ಧರಿಸಲು ಬಯಾಲಾಜಿಕಲ್ ಟೆಸ್ಟಿಂಗ್ ಲ್ಯಾಬ್ ಅಗತ್ಯವಿದೆ.
ಈಗ ನಡೆಯುತ್ತಿರುವ ಪರೀಕ್ಷೆ ಹೇಗೆ?
ಪ್ರಸ್ತುತ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳ ಉಪಸ್ಥಿತಿ ಇದೆಯೇ ಎಂಬುದನ್ನು ಕೆಮಿಕಲ್ ಲ್ಯಾಬ್‌ಗಳಲ್ಲೇ ಪರಿಶೀಲಿಸಲಾಗುತ್ತಿದೆ. ವಯಲ್ಸ್ ವಿಧಾನದ ಮೂಲಕ ಪ್ರಿಸಂ ಸ್ಕ್ರೀನ್ ಟೆಸ್ಟ್ ನಡೆಸಲಾಗುತ್ತಿದೆ. ಆದರೆ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನು ಈ ಪರೀಕ್ಷೆಯಿಂದ ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಹೆಚ್ಚಿನ ಪ್ರಮಾಣದ ವಿವರವಾದ ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಗಳ ನೆರವು ಪಡೆಯಬೇಕಾದ ಪರಿಸ್ಥಿತಿ ಇದೆ. ಕುಡಿಯಲು ನೀರು ಯೋಗ್ಯವಾಗಿದೆ ಎಂದು ಸಂಪೂರ್ಣವಾಗಿ ದೃಢಪಡಿಸಲು ಒಟ್ಟು 32 ಮಾನದಂಡಗಳನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿರುವ ಕೆಮಿಕಲ್ ಲ್ಯಾಬ್‌ಗಳಲ್ಲಿ 16 ಮಾನದಂಡಗಳನ್ನಷ್ಟೇ ಖಚಿತಪಡಿಸಲು ಸಾಧ್ಯವಾಗುತ್ತಿದೆ. ಉಳಿದ ಪರೀಕ್ಷೆಗಳಿಗೆ ಬಯಾಲಾಜಿಕಲ್ ಲ್ಯಾಬ್‌ನ ಅಗತ್ಯವಿದೆ.
10,566 ನೀರಿನ ಮಾದರಿ ಪರೀಕ್ಷೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿರುವ ಮೂರು ಕೆಮಿಕಲ್ ಲ್ಯಾಬ್‌ಗಳು ಎನ್‌ಎಬಿಎಲ್ ಮಾನ್ಯತೆ ಪಡೆದಿವೆ.
2025-26ನೇ ಸಾಲಿನಲ್ಲಿ ಮಂಗಳೂರು ಪ್ರಯೋಗಾಲಯದಲ್ಲಿ 4,009 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಈ ಪೈಕಿ 431 ಮಾದರಿಗಳು ಕಲುಷಿತವಾಗಿರುವುದು ವರದಿಯಾಗಿದೆ.
ಬೆಳ್ತಂಗಡಿ ಪ್ರಯೋಗಾಲಯದಲ್ಲಿ 3,506 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 4 ಮಾದರಿಗಳು ಕಲುಷಿತ ಎಂದು ಪತ್ತೆಯಾಗಿದೆ. ಪುತ್ತೂರು ಪ್ರಯೋಗಾಲಯದಲ್ಲಿ 3,505 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, 6 ಮಾದರಿಗಳು ಕಲುಷಿತವಾಗಿರುವುದು ವರದಿಯಾಗಿದೆ.
ಮೂರು ಪ್ರಯೋಗಾಲಯಗಳ ಒಟ್ಟು ಅಂಕಿ-ಅಂಶಗಳನ್ನು ನೋಡಿದರೆ 10,566 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವುಗಳಲ್ಲಿ 441 ಮಾದರಿಗಳು ಕಲುಷಿತವಾಗಿರುವುದು ಪತ್ತೆಯಾಗಿದೆ. ನೀರಿನ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲು ಜಿಲ್ಲೆಯಲ್ಲಿ ಬಯಾಲಾಜಿಕಲ್ ಪ್ರಯೋಗಾಲಯ ಸ್ಥಾಪಿಸುವ ಅಗತ್ಯ ಮತ್ತೊಮ್ಮೆ ಸ್ಪಷ್ಟವಾಗಿದೆ.





