28 September 2026 |

ಕಲ್ಲಡ್ಕ ಸುಧೆಕ್ಕಾರ್‌ನಲ್ಲಿ ಇನ್ನೂ ಬಳಕೆಯಾಗದ ಕೋಟ್ಯಂತರ ವೆಚ್ಚದ ಹಾಸ್ಟೆಲ್‌; ಸಿಬ್ಬಂದಿ ಕೊರತೆಯಿಂದ ಬೀಗ

  • 27 Sep 2026 05:50:13 PM

ಬಂಟ್ವಾಳ: ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ವಸತಿ ನಿಲಯವೊಂದು ಪೂರ್ಣಗೊಂಡು ವರ್ಷ ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ತೆರೆದುಕೊಂಡಿಲ್ಲ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಧೆಕ್ಕಾರ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಿಸಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯವೇ ಇದೀಗ ಬಳಕೆಯಾಗದೆ ಉಳಿದಿದೆ.

 

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಸತಿ ಸೌಲಭ್ಯಕ್ಕಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದು, ಕಟ್ಟಡಕ್ಕೆ ಸುಣ್ಣ-ಬಣ್ಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ವಾಸಕ್ಕೆ ಬೇಕಾದ ಮೂಲಸೌಕರ್ಯ, ಕಂಪೌಂಡ್‌ ವಾಲ್ ಸೇರಿದಂತೆ ಹಲವು ವ್ಯವಸ್ಥೆಗಳು ಇಲ್ಲಿವೆ. ಇತ್ತೀಚೆಗೆ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದ್ದರೂ, ಅಗತ್ಯ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ.

 

ಕಟ್ಟಡ ಸಿದ್ಧವಾಗಿದ್ದರೂ ಸಿಬ್ಬಂದಿ ನೇಮಕಾತಿ ಸೇರಿದಂತೆ ಕೆಲವು ವ್ಯವಸ್ಥೆಗಳು ಪೂರ್ಣಗೊಳ್ಳದ ಕಾರಣ ವಸತಿ ನಿಲಯವನ್ನು ಆರಂಭಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಕಳೆದ ಒಂದು ವರ್ಷದಿಂದ ಕಟ್ಟಡದ ಗೇಟ್‌ಗೆ ಬೀಗ ಹಾಕಲಾಗಿದೆ.

 

ಸ್ಥಳ ಹುಡುಕುವುದೇ ಸವಾಲಾಗಿತ್ತು

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಮೆಟ್ರಿಕ್ ನಂತರದ ಹೊಸ ವಸತಿ ನಿಲಯಗಳು ಮಂಜೂರಾಗಿ ಹಲವು ವರ್ಷಗಳಾಗಿವೆ. ಬಂಟ್ವಾಳದಲ್ಲಿ ಸೂಕ್ತ ಜಾಗದ ಕೊರತೆಯಿಂದ ಹಾಸ್ಟೆಲ್‌ ನಿರ್ಮಾಣ ವಿಳಂಬವಾಗಿತ್ತು. ಹಲವು ಪ್ರದೇಶಗಳಲ್ಲಿ ಸ್ಥಳ ಹುಡುಕಿದ ಬಳಿಕ ಸುಧೆಕ್ಕಾರ್‌ನಲ್ಲಿ ಜಾಗ ಗುರುತಿಸಿ ಕಟ್ಟಡ ನಿರ್ಮಿಸಲಾಯಿತು.

 

ಹಾಸ್ಟೆಲ್‌ ಮಂಜೂರಾದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸೂಕ್ತ ಸ್ಥಳದ ಕೊರತೆ ಪ್ರಮುಖ ಸಮಸ್ಯೆಯಾಗಿತ್ತು. ಕೊನೆಗೆ ಜಾಗ ದೊರೆತು ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೂ, ಇದೀಗ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಾರಂಭಕ್ಕೆ ತಡೆ ಉಂಟಾಗಿದೆ.

 

ಎಸ್‌ಸಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌

ಬಂಟ್ವಾಳ ತಾಲೂಕಿನಲ್ಲಿ ಎಸ್‌ಸಿ ವಿದ್ಯಾರ್ಥಿಗಳಿಗಾಗಿ ಬೆಂಜನಪದವು, ಮೊಡಂಕಾಪು, ಪಾಣೆಮಂಗಳೂರು ಹಾಗೂ ಕನ್ಯಾನದಲ್ಲಿ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಕುದ್ದುಪದವು, ಕಡೇಶಿವಾಲಯ, ವಿಟ್ಲ ಹಾಗೂ ಅಡ್ಯನಡ್ಕದಲ್ಲಿ ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳಿವೆ.

 

ಸುಧೆಕ್ಕಾರ್‌ನಲ್ಲಿ ನಿರ್ಮಿಸಿರುವ ಹೊಸ ವಸತಿ ನಿಲಯವು ಎಸ್‌ಸಿ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದು, ಸುಮಾರು 100 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

 

ವಿದ್ಯಾರ್ಥಿಗಳ ದಾಖಲಾತಿ ಬಗ್ಗೆ ಪ್ರಶ್ನೆ

ಗ್ರಾಮೀಣ ಭಾಗದಲ್ಲಿರುವ ಈ ವಸತಿ ನಿಲಯಕ್ಕೆ ನಿಗದಿತ ಸಾಮರ್ಥ್ಯದಷ್ಟು ವಿದ್ಯಾರ್ಥಿಗಳು ದಾಖಲಾಗುತ್ತಾರೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗದಿದ್ದರೆ, ಹಾಸ್ಟೆಲ್‌ ಸಂಪೂರ್ಣ ಸಾಮರ್ಥ್ಯದಲ್ಲಿ ಬಳಕೆಯಾಗದೆ ಉಳಿಯುವ ಸಾಧ್ಯತೆಯಿದೆ.

 

ಗ್ರಾಮಾಂತರ ಪ್ರದೇಶಗಳಿಂದ ಸಾಕಷ್ಟು ವಿದ್ಯಾರ್ಥಿಗಳು ದಾಖಲಾಗದ ಪರಿಸ್ಥಿತಿ ಎದುರಾದರೆ, ಮಂಗಳೂರು ಸೇರಿದಂತೆ ಇತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ಕಲ್ಪಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.