02 October 2026 |

ವಿಮಾನದಲ್ಲೇ ಪ್ರಯಾಣಿಕನಿಗೆ ಹೃದಯಾಘಾತ — ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಪುತ್ತೂರಿನ ವೈದ್ಯ

  • 01 Oct 2026 02:08:03 PM

ಪುತ್ತೂರು: ಲಕ್ಷದ್ವೀಪದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ 42 ವರ್ಷದ ಪ್ರಯಾಣಿಕರೊಬ್ಬರಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಹೃದಯಾಘಾತದ ಲಕ್ಷಣಗಳು ಎದುರಾದಾಗ, ಅದೇ ವಿಮಾನದಲ್ಲಿದ್ದ ಈಶ್ವರಮಂಗಲದ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲು ತಕ್ಷಣ ನೆರವಿಗೆ ಧಾವಿಸಿ ತುರ್ತು ಚಿಕಿತ್ಸೆ ನೀಡಿದ ಘಟನೆ ಸೆಪ್ಟೆಂಬರ್ 29ರಂದು ನಡೆದಿದೆ.

 

ಕುಟುಂಬದೊಂದಿಗೆ ತೀರ್ಥಕ್ಷೇತ್ರಗಳ ಭೇಟಿ ಮುಗಿಸಿ ವಿಮಾನದಲ್ಲಿ ಊರಿಗೆ ಮರಳುತ್ತಿದ್ದ ಮುಂಬೈ ಮೂಲದ ಮಂಜೇಶ್ ಅವರಿಗೆ ಪ್ರಯಾಣದ ಮಧ್ಯೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ಗಮನಿಸಿದ ಡಾ. ಶ್ರೀಕುಮಾರ್, ವಿಮಾನದಲ್ಲಿದ್ದ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಬಳಸಿಕೊಂಡು ಆಮ್ಲಜನಕ ಒದಗಿಸಿ, ಅಗತ್ಯ ಔಷಧಿ ನೀಡುವುದರ ಜೊತೆಗೆ ಸಿಪಿಆರ್ ಕೂಡ ಮಾಡಿದ್ದಾರೆ.

 

ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಮಂಜೇಶ್ ಅವರ ಸ್ಥಿತಿ ಕೊಂಚ ಸುಧಾರಿಸಿದ್ದು, ವಿಮಾನ ಮುಂಬೈ ತಲುಪಿದ ಬಳಿಕ ಅವರನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

 

ಭಾರತೀಯ ನೌಕಾಪಡೆಯ ಮಾಜಿ ಯೋಧರಾಗಿರುವ ಮಂಜೇಶ್ ಅವರು ತಮ್ಮ ಪತ್ನಿ ಹಾಗೂ ಎರಡು ವರ್ಷದ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು.

 

ವಿಮಾನದಲ್ಲಿದ್ದ ಪ್ರಯಾಣಿಕರು ವೈದ್ಯ ಡಾ. ಶ್ರೀಕುಮಾರ್ ಅವರ ಸಮಯಪ್ರಜ್ಞೆ ಮತ್ತು ಸೇವೆಗೆ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ವಿಮಾನಯಾನ ಸಂಸ್ಥೆ ಇಂಡಿಗೋ ಕೂಡ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದೆ.