02 October 2026 |

ಬಸ್‌ ನಿಲ್ದಾಣದಲ್ಲಿ ಯುವತಿಯರ ಫೋಟೋ ಸೆರೆಹಿಡಿದ ಆರೋಪ: ವ್ಯಕ್ತಿಗೆ ಸಾರ್ವಜನಿಕರಿಂದ ತರಾಟೆ

  • 01 Oct 2026 03:11:11 PM

ಬಸ್‌ ನಿಲ್ದಾಣದಲ್ಲಿ ಯುವತಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

 

ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿ ಎನ್ನಲಾದ ವ್ಯಕ್ತಿಯೊಬ್ಬ ಕೊಪ್ಪಳದ ಗಂಗಾವತಿ ಬಸ್‌ ನಿಲ್ದಾಣದಲ್ಲಿ ಯುವತಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ತೆಗೆಯುತ್ತಿದ್ದಾಗ ಕೆಲ ಮಹಿಳೆಯರ ಗಮನಕ್ಕೆ ಬಂದಿದೆ. ಇದನ್ನು ಪ್ರಶ್ನಿಸಿದ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ಆತನನ್ನು ತಡೆದು ವಿಚಾರಿಸಿದ್ದಾರೆ.

 

ನಂತರ ಆತನ ಮೊಬೈಲ್ ಪರಿಶೀಲಿಸಿದಾಗ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಹಲವು ಫೋಟೋಗಳು ಕಂಡುಬಂದಿವೆ ಎನ್ನಲಾಗಿದೆ. ಜೊತೆಗೆ ಅಶ್ಲೀಲ ಚಿತ್ರಗಳೂ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಘಟನೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.