ಉಪ್ಪಿನಂಗಡಿ: ಕುಮಾರಧಾರ ಹಳೆ ಸೇತುವೆ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಮಾಧವ ಗೌಡ (44) ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಆತೂರಿನಲ್ಲಿ ಇತ್ತೀಚೆಗಷ್ಟೇ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದ್ದ ಮಾಧವ ಗೌಡ ಅವರು ಅ.2ರಂದು ಮನೆಯಿಂದ ಅಂಗಡಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಆದರೆ ಬಳಿಕ ಅಂಗಡಿಗೂ ತೆರಳದೆ, ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದರು.
ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಉಪ್ಪಿನಂಗಡಿಯ ಕುಮಾರಧಾರ ಹಳೆ ಸೇತುವೆ ಮೇಲೆ ಅವರ ಬೈಕ್ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಮಾಧವ ಗೌಡ ಅವರಿಗಾಗಿ ನಿನ್ನೆ ದಿನವಿಡೀ ‘ಜಿವಿ ಫ್ರೆಂಡ್ಸ್ ಕಡೇಶಿವಾಲಯ (ರಿ)’ ತಂಡ ಡ್ರೋನ್ ಮೂಲಕ ನದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿತ್ತು. ಆದರೆ ದಿನವಿಡೀ ನಡೆದ ಹುಡುಕಾಟದಲ್ಲೂ ಮೃತದೇಹ ಪತ್ತೆಯಾಗಿರಲಿಲ್ಲ.
ಮುಂದುವರಿದ ಶೋಧ ಕಾರ್ಯಾಚರಣೆಯ ವೇಳೆ ಇದೀಗ ನೇತ್ರಾವತಿ ನದಿಯಲ್ಲಿ ಮಾಧವ ಗೌಡ ಅವರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





