ಮನೆಯವರು ಹೊರಗೆ ತೆರಳಿದ್ದ ಸಂದರ್ಭವನ್ನು ಹೊಂಚುಹಾಕಿದ ಕಳ್ಳರು ಮನೆಯ ಬಾಗಿಲಿನ ಕಬ್ಬಿಣದ ಲ್ಯಾಚ್ ಮುರಿದು ಒಳ ಪ್ರವೇಶಿಸಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ.
ಮನೆಯವರು ಹೊರಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಬಾಗಿಲಿನ ಲ್ಯಾಚ್ ಮುರಿದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಮೂಲ್ಕಿ ತಾಲೂಕಿನ ಕಿಲ್ಪಾಡಿ ಗ್ರಾಮದ ತಿರುಮಲಗುತ್ತು ಸಮೀಪದ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು 321 ಗ್ರಾಂ (39 ಪವನ್) ಚಿನ್ನಾಭರಣ, ₹10 ಸಾವಿರ ನಗದು ಹಾಗೂ ನಾಣ್ಯಗಳನ್ನು ಕದ್ದೊಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.





