08 October 2026 |

KSRTC ಚಾಲಕನ ಸಮಯಪ್ರಜ್ಞೆ; ಅಸ್ವಸ್ಥ ಪ್ರಯಾಣಿಕೆಯನ್ನು ಆಸ್ಪತ್ರೆಗೆ ದಾಖಲಿಸಿ

  • 07 Oct 2026 02:49:34 PM

ದಾವಣಗೆರೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ KSRTC ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಏಕಾಏಕಿ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡ ಘಟನೆ ಅಕ್ಟೋಬರ್ 6ರ ಸಂಜೆ ಬೆಳ್ತಂಗಡಿ ಭಾಗದಲ್ಲಿ ನಡೆದಿದೆ. ಸಂಜೆ ಸುಮಾರು 4 ಗಂಟೆ ವೇಳೆಗೆ ಮಹಿಳೆಯ ಆರೋಗ್ಯದಲ್ಲಿ ಏಕಾಏಕಿ ತೊಂದರೆ ಕಾಣಿಸಿಕೊಂಡಿದ್ದು, ಅವರು ಬಸ್‌ನಲ್ಲೇ ಪ್ರಜ್ಞೆ ತಪ್ಪಿದ್ದಾರೆ.

 

ಮಹಿಳೆ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಸಹಪ್ರಯಾಣಿಕರು ತಕ್ಷಣವೇ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಅವರು ವಿಳಂಬ ಮಾಡದೆ ಬಸ್‌ನ ಮಾರ್ಗವನ್ನು ಬದಲಿಸಿ ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.

 

ತುರ್ತು ಪರಿಸ್ಥಿತಿಯಲ್ಲಿ ಸಮಯ ವ್ಯರ್ಥ ಮಾಡದೆ ಚಾಲಕ ಬಸ್ ಅನ್ನು ಆಸ್ಪತ್ರೆಗೆ ತಲುಪಿಸುವ ಮೂಲಕ ಅಸ್ವಸ್ಥ ಮಹಿಳೆಗೆ ತಕ್ಷಣ ವೈದ್ಯಕೀಯ ನೆರವು ದೊರೆಯುವಂತೆ ಮಾಡಿದ್ದಾರೆ. ಬಸ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಮಾನವೀಯ ನಡೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

ಬಸ್ ಕಕ್ಕಿಂಜೆ ಭಾಗಕ್ಕೆ ತಲುಪಿದ ಬಳಿಕ ಸ್ಥಳೀಯರೂ ಸಹಾಯಕ್ಕೆ ಮುಂದಾಗಿದ್ದು, ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಬಳಿಕ ವೈದ್ಯರು ಮಹಿಳೆಗೆ ಅಗತ್ಯ ಚಿಕಿತ್ಸೆ ನೀಡಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ತುರ್ತು ಸಂದರ್ಭದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರ ಆತಂಕದ ನಡುವೆಯೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ KSRTC ಚಾಲಕ ಕಿರಣ್ ಹಾಗೂ ನಿರ್ವಾಹಕ ಸಂತೋಷ್ ಸಂಗಪ್ಪ ಗೌಡ ಅವರ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದ ಪರಿಣಾಮ ಮಹಿಳೆಗೆ ತಕ್ಷಣ ಚಿಕಿತ್ಸೆ ದೊರೆಯುವಂತಾಗಿದೆ.