ಸುಳ್ಯ ಪಟ್ಟಣದ ಶ್ರೀರಾಮಪೇಟೆಯಲ್ಲಿ ಮಗು ಚರಂಡಿಗೆ ಬಿದ್ದ ಘಟನೆ ನಡೆದಿದೆ. ಮುಳಿಯ ಜ್ಯುವೆಲ್ಲರ್ಸ್ ಎದುರು ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಫುಟ್‌ಪಾತ್‌ನ ಚರಂಡಿ ಮೇಲಿನ ಸ್ಲ್ಯಾಬ್ ತೆರವುಗೊಳಿಸಲಾಗಿತ್ತು.
ಮನೆಯವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಗು ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ನೋಡುತ್ತಾ ಮುಂದೆ ಸಾಗುತ್ತಿದ್ದಾಗ, ತೆರವುಗೊಳಿಸಿದ್ದ ಚರಂಡಿಯೊಳಗೆ ಆಕಸ್ಮಿಕವಾಗಿ ಬಿದ್ದಿದೆ.
ಮಗು ಚರಂಡಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಮಗುವಿಗೆ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ.
ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಕಾಮಗಾರಿ ನಡೆಸುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತೆರೆದ ಚರಂಡಿ ಹಾಗೂ ಅಪಾಯಕಾರಿ ಪ್ರದೇಶಗಳಿಗೆ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





