ಶಿವಮೊಗ್ಗ: ಬೆಂಗಳೂರಿನಿಂದ ಸಾಗರದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಸ್ವೀಪರ್ ಬಸ್‌ವೊಂದು ಆನಂದಪುರ ಸಮೀಪದ ಮುಂಬಾಳು ಗ್ರಾಮದಲ್ಲಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಇಡೀ ಬಸ್ ಸುಟ್ಟು ಕರಕಲಾಗಿದೆ.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ಕ್ಲೀನರ್ ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿದ್ದಾರೆ. ಈ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಹುತೇಕ ಪ್ರಯಾಣಿಕರು ಈಗಾಗಲೇ ಶಿವಮೊಗ್ಗದಲ್ಲಿ ಇಳಿದಿದ್ದರು. ಸಾಗರದವರೆಗೆ ಮುಂದುವರಿದಿದ್ದ ಬಸ್‌ನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಇದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್‌ನಲ್ಲಿದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇತ್ತು.





