ಮಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್, ಚಿನ್ನದ ಸರ, ಕೈಗಡಿಯಾರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ ಪ್ರಕರಣವನ್ನು ರೈಲ್ವೆ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಯಾಣಿಕರಿಗೆ ಮರಳಿಸಲಾಗಿದ್ದು, ಆರೋಪಿಯನ್ನು ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಅಭಿಷೇಕ್ ಎಂಬವರು ರೈಲು ಸಂಖ್ಯೆ 16585ರಲ್ಲಿ ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತಮ್ಮ ಬರ್ತ್‌ನಲ್ಲಿ ಇಟ್ಟಿದ್ದ ಲೆನೊವೊ ಲ್ಯಾಪ್‌ಟಾಪ್, ಚಾರ್ಜರ್, ಚಿನ್ನದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳಿದ್ದ ಬ್ಯಾಗ್ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ರೈಲ್ವೆಯ 139 ರೈಲ್‌ಮದದ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ಮತ್ತು ಸಕಲೇಶಪುರ ನಡುವಿನ ಪ್ರಯಾಣದ ವೇಳೆ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿತ್ತು.
ದೂರು ದಾಖಲಾದ ಬಳಿಕ ರೈಲ್ವೆ ರಕ್ಷಣಾ ಪಡೆ (RPF) ತನಿಖೆ ಆರಂಭಿಸಿತು. ಇದೇ ಸಂದರ್ಭದಲ್ಲಿ ಬೆಳಗಾವಿ–ಮೈಸೂರು ಮಾರ್ಗದ ರೈಲು ಸಂಖ್ಯೆ 17302ರಲ್ಲಿ ಕರ್ತವ್ಯದಲ್ಲಿದ್ದ ಟಿಕೆಟ್ ತಪಾಸಕ (TTE) ಚಂದ್ರ ನಾಯಕ್ ಅವರಿಗೆ ವ್ಯಕ್ತಿಯೊಬ್ಬನ ಚಲನವಲನ ಅನುಮಾನಾಸ್ಪದವಾಗಿ ಕಂಡುಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಆತನನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆದು ಕೆ.ಆರ್. ನಗರದ ಆರ್‌ಪಿಎಫ್ ಔಟ್‌ಪೋಸ್ಟ್‌ಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಹೊಳೆನರಸೀಪುರ ಮತ್ತು ಹಾಸನ ನಡುವಿನ ಮಾರ್ಗದಲ್ಲಿ ರೈಲು ಸಂಖ್ಯೆ 16585ರಿಂದ ಲ್ಯಾಪ್‌ಟಾಪ್ ಬ್ಯಾಗ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಸವರಾಜ ಎಂದು ಗುರುತಿಸಲಾಗಿದೆ.
ನಂತರ ಆರೋಪಿಯನ್ನು ಹೆಚ್ಚಿನ ಕಾನೂನು ಕ್ರಮಕ್ಕಾಗಿ ಕೆ.ಆರ್. ನಗರದ ಸರ್ಕಾರಿ ರೈಲ್ವೆ ಪೊಲೀಸ್ (GRP) ಠಾಣೆಗೆ ಹಸ್ತಾಂತರಿಸಲಾಗಿದೆ. ಕಳುವಾಗಿದ್ದ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡು ದೂರುದಾರ ಅಭಿಷೇಕ್ ಅವರಿಗೆ ಸುರಕ್ಷಿತವಾಗಿ ಹಿಂದಿರುಗಿಸಲಾಗಿದೆ.
ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನು ಗುರುತಿಸಿ ತ್ವರಿತವಾಗಿ ಕ್ರಮ ಕೈಗೊಂಡ ಟಿಟಿಇ ಚಂದ್ರ ನಾಯಕ್ ಅವರ ಸಮಯಪ್ರಜ್ಞೆ ಮತ್ತು ಕಾರ್ಯದಕ್ಷತೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಶ್ಲಾಘಿಸಿದೆ.





