ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆ ಎಂಬಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ವಾಹನಕ್ಕೂ ಭಾರೀ ಹಾನಿಯಾಗಿದೆ.
ಗಾಯಗೊಂಡವರನ್ನು ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ, 45 ವರ್ಷದ ಮೇಸ್ತ್ರಿ ರಾಮಣ್ಣ ಮೂಲ್ಯ ಎಂದು ಗುರುತಿಸಲಾಗಿದೆ. ಅವರು ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದಾಗ, ಬೊಲ್ಪಾದೆಯ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದ್ದು, ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಅಪಘಾತದ ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಈ ಅಪಘಾತದಿಂದ ಬೊಲ್ಪಾದೆಯ ಅಪಾಯಕಾರಿ ತಿರುವಿನಲ್ಲಿ ವಾಹನ ಸಂಚಾರದ ಸುರಕ್ಷತೆಯ ಬಗ್ಗೆ ಮತ್ತೆ ಗಮನ ಸೆಳೆಯಲಾಗಿದೆ.





