14 October 2026 |

ವಿದ್ಯುತ್ ಅವಘಡ: ಬಾವ–ಬಾಮೈದ ಸಾವು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯ

  • 13 Oct 2026 05:37:24 PM

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ಅಕ್ಟೋಬರ್ 12ರ ರಾತ್ರಿ ನಡೆದಿದೆ. ಮೃತಪಟ್ಟವರು ಬಾವ ಮತ್ತು ಬಾಮೈದನಾಗಿದ್ದು, ಅವರೊಂದಿಗೆ ಮೀನು ಹಿಡಿಯಲು ತೆರಳಿದ್ದ ಮತ್ತೊಬ್ಬ ಯುವಕ ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದಾರೆ.

 

ಮೃತರನ್ನು ಕಲ್ಮಡ್ಕದ ಬೊಮ್ಮೆಟ್ಟಿ ಬಾಬು ಮತ್ತು ಸೀತಾ ದಂಪತಿಯ ಪುತ್ರ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಮುಂಗೆಲು ನಿವಾಸಿಗಳಾದ ವೀರಪ್ಪ ಮತ್ತು ಸೀತಮ್ಮ ದಂಪತಿಯ ಪುತ್ರ, ಭರತ್ ಅವರ ಸಹೋದರಿ ಭವ್ಯಾ ಅವರ ಪತಿ ರಮೇಶ್ (34) ಎಂದು ಗುರುತಿಸಲಾಗಿದೆ.

 

ಅಕ್ಟೋಬರ್ 12ರ ರಾತ್ರಿ ಭರತ್, ರಮೇಶ್ ಹಾಗೂ ಅವರ ಸಂಬಂಧಿ ಸಿಂಚನ್ ಎಂಬ ಯುವಕ ಮೀನು ಹಿಡಿಯುವ ಉದ್ದೇಶದಿಂದ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತೋಡಿಗೆ ತೆರಳಿದ್ದರು. ರಾತ್ರಿ ಸುಮಾರು 10.30ರ ವೇಳೆಗೆ ತೋಡಿನ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ದಾಟಲು ಪ್ರಯತ್ನಿಸಿದಾಗ ಭರತ್ ಮತ್ತು ರಮೇಶ್ ಅವರಿಗೆ ತಂತಿ ತಗುಲಿದೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಇದೇ ವೇಳೆ ಅವರ ಜೊತೆಗಿದ್ದ ಸಿಂಚನ್ ಅವರಿಗೂ ವಿದ್ಯುತ್ ಆಘಾತ ತಗುಲಿ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಘಟನೆಯಲ್ಲಿ ಅವರ ಕೈ, ಎದೆ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಘಟನೆ ನಡೆದ ಬಳಿಕ ವಿದ್ಯುತ್ ತಂತಿ ಅಳವಡಿಸಿದ್ದ ಮನೆಯವರಿಗೆ ವಿಷಯ ತಿಳಿದು, ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

 

ದುರ್ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಕಾರ್ಯ ಕೈಗೊಂಡಿದ್ದಾರೆ. ಮೃತಪಟ್ಟ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡಿರುವ ಸಿಂಚನ್ ಅವರನ್ನು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.

 

ಒಂದೇ ಕುಟುಂಬದ ಸಂಬಂಧ ಹೊಂದಿದ್ದ ಇಬ್ಬರು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.