22 October 2026 |

ಶಿವಮೊಗ್ಗ ದಸರಾ ಜಂಬೂ ಸವಾರಿಯಲ್ಲಿ ಆತಂಕ: ಅಂಬಾರಿ ಕೆಳಕ್ಕೆ ಬೀಳಿಸಿ ಓಡಿದ ಆನೆ, ವಾಹನಗಳಿಗೆ ಹಾನಿ

  • 22 Oct 2026 09:51:15 AM

ಶಿವಮೊಗ್ಗ: ದಸರಾ ಜಂಬೂ ಸವಾರಿ ಮೆರವಣಿಗೆಯ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಗಾಬರಿಗೊಂಡು ಅಂಬಾರಿಯನ್ನು ಕೆಳಕ್ಕೆ ಬೀಳಿಸಿ ಓಡಿದ ಘಟನೆ ಬುಧವಾರ ಸಂಭವಿಸಿದೆ. ಇದರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು.

 

ತಾಯಿ ಚಾಮುಂಡೇಶ್ವರಿಯ ಮೂರ್ತಿ ಇರಿಸಲಾಗಿದ್ದ ಬೆಳ್ಳಿಯ ಮಂಟಪ ಆನೆಯ ಬೆನ್ನಿನಿಂದ ಕೆಳಕ್ಕೆ ಬಿದ್ದು ಹಾನಿಯಾಗಿದೆ. ಆನೆ ಓಡಿದ ರಭಸಕ್ಕೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಮತ್ತು ಮೂರು ಬೈಕ್‌ಗಳು ಜಖಂಗೊಂಡಿವೆ. ಘಟನೆಯಿಂದ ಗಾಬರಿಗೊಂಡ ಜನರು ಸುರಕ್ಷಿತ ಸ್ಥಳಗಳತ್ತ ಓಡಿದರು.

 

ಮೆರವಣಿಗೆಯ ಸಂದರ್ಭದಲ್ಲಿ ಉಂಟಾದ ಭಾರೀ ಜನಸಂದಣಿ, ವಾದ್ಯಗಳ ಸದ್ದು ಮತ್ತು ಗದ್ದಲದಿಂದ ಸೋಮಣ್ಣ ಆನೆ ಬೆದರಿರಬಹುದು ಎಂದು ತಿಳಿದುಬಂದಿದೆ. ಆನೆಯನ್ನು ನಿಯಂತ್ರಣಕ್ಕೆ ತರಲು ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದರು. ಬಳಿಕ ಅರಣ್ಯ ಇಲಾಖೆಯ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

 

ಮೈಸೂರಿನ ದಸರಾ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಪ್ರತಿವರ್ಷ ತಾಯಿ ಚಾಮುಂಡೇಶ್ವರಿಯ ಬೆಳ್ಳಿಯ ಮಂಟಪದ ಜಂಬೂ ಸವಾರಿ ಆಯೋಜಿಸಲಾಗುತ್ತದೆ. ಈ ಬಾರಿ ಸಕ್ರೆಬೈಲು ಆನೆ ಶಿಬಿರದಿಂದ ಸಾಗರ, ಸೋಮಣ್ಣ ಮತ್ತು ಬಹದ್ದೂರ್ ಆನೆಗಳನ್ನು ಕರೆತಂದು ವಿಶೇಷ ತರಬೇತಿ ನೀಡಲಾಗಿತ್ತು. ಸಾಮಾನ್ಯವಾಗಿ ಸಾಗರ ಆನೆ ಅಂಬಾರಿ ಹೊರುತ್ತಿದ್ದರೆ, ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ಸೋಮಣ್ಣನನ್ನು ಆಯ್ಕೆ ಮಾಡಿದ್ದರು.

 

ಬುಧವಾರ ಮಧ್ಯಾಹ್ನ ಶಿವಪ್ಪ ನಾಯಕ ಕೋಟೆಯ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ಮಾವುತರು ಮತ್ತು ಕಾವಾಡಿಗಳು ಆನೆಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಮೆರವಣಿಗೆ ಸಾಗುತ್ತಿದ್ದ ವೇಳೆ ಈ ಅಹಿತಕರ ಘಟನೆ ಸಂಭವಿಸಿದೆ.

 

ಘಟನೆಯ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಂಬೂ ಸವಾರಿಯನ್ನು ಸ್ಥಗಿತಗೊಳಿಸಲಾಯಿತು.