ಗಾಜಿಯಾಬಾದ್: ತನ್ನ ಪತ್ನಿಯೊಂದಿಗೆ ಜಿಮ್ ತರಬೇತುದಾರ ಹೊಂದಿದ್ದ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ದೆಹಲಿ ಸರ್ಕಾರದ ಹಿರಿಯ ಅಕೌಂಟೆಂಟ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್ನ ವಸುಂಧರಾ ಪ್ರದೇಶದಲ್ಲಿ 35 ವರ್ಷದ ಶಶಾಂಕ್ ಕಂಥಾರಿಯಾ ಎಂಬುವವರ ಮೇಲೆ ಈ ದಾಳಿ ನಡೆದಿದೆ. ಅವರು ಮನೆಯಲ್ಲಿ ಮಲಗಿದ್ದ ವೇಳೆ ಬಂದ ಜಿಮ್ ತರಬೇತುದಾರ ಬರೋಬ್ಬರಿ 12 ಬಾರಿ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಶಶಾಂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಶಾಂಕ್ ಅವರ ಪತ್ನಿ ಪ್ರಿಯಾ (32) ಮತ್ತು ಜಿಮ್ ತರಬೇತುದಾರ ಪ್ರತಾಪ್ ಸಿಂಗ್ (30) ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ವಿಚಾರ ಪತಿ ಶಶಾಂಕ್ ಅವರಿಗೆ ತಿಳಿದುಬಂದಿತ್ತು. ಇದರಿಂದ ಪತ್ನಿಯನ್ನು ಪ್ರಶ್ನಿಸಿದ್ದ ಅವರು, ಪ್ರತಾಪ್ ಜೊತೆಗಿನ ಸಂಬಂಧವನ್ನು ಅಂತ್ಯಗೊಳಿಸುವಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಕುಟುಂಬದೊಂದಿಗೆ ದೆಹಲಿಗೆ ಸ್ಥಳಾಂತರಗೊಳ್ಳುವ ಉದ್ದೇಶದಿಂದ ಹೊಸ ಮನೆ ಹುಡುಕುವ ಕೆಲಸದಲ್ಲಿದ್ದರು.
ಸೋಮವಾರ ಬೆಳಗ್ಗೆ ಪ್ರಿಯಾ ಜಿಮ್ಗೆ ಹೋಗಿದ್ದ ಸಮಯದಲ್ಲಿ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಪ್ರತಾಪ್, ಒಳಗೆ ಪ್ರವೇಶಿಸಿದ್ದಾನೆ. ಬಳಿಕ ಮಲಗಿದ್ದ ಶಶಾಂಕ್ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ಎಚ್ಚರಗೊಂಡ ಶಶಾಂಕ್ ಜೋರಾಗಿ ಕೂಗಿಕೊಂಡಿದ್ದಾರೆ. ಇದೇ ವೇಳೆ ಅವರ ಪುಟ್ಟ ಮಗಳ ಅಳುವಿನ ಶಬ್ದ ಕೇಳಿ ನೆರೆಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಅದೃಷ್ಟವಶಾತ್, ಮಗುವಿಗೆ ಯಾವುದೇ ಗಾಯಗಳಾಗಿಲ್ಲ.
ದಾಳಿ ನಡೆಸಿದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರತಾಪ್ನನ್ನು ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಯ ಬಳಿಯಿದ್ದ ಎರಡು ಚೂರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಶಶಾಂಕ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಿಯಾ ಮತ್ತು ಪ್ರತಾಪ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಯತ್ನ, ಹಲ್ಲೆ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಮನೆ ಪ್ರವೇಶಿಸುವುದು ಹಾಗೂ ಕ್ರಿಮಿನಲ್ ಸಂಚು ರೂಪಿಸಿರುವ ಆರೋಪಗಳನ್ನು ಹೊರಿಸಲಾಗಿದೆ.
ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.





