31 October 2026 |

ಮಂಗಳೂರಿನಲ್ಲಿ ನಕಲಿ ಇ-ಚಲನ್ ಹೆಸರಿನಲ್ಲಿ ಸೈಬರ್ ವಂಚನೆ: ಸಾರ್ವಜನಿಕರಿಗೆ ₹44 ಲಕ್ಷ ನಷ್ಟ!

  • 31 Oct 2026 10:08:13 AM

ಮಂಗಳೂರು: ನಗರದಲ್ಲಿ ನಕಲಿ ಟ್ರಾಫಿಕ್ ಇ-ಚಲನ್ ಸಂದೇಶಗಳನ್ನು ಬಳಸಿ ಸೈಬರ್ ವಂಚಕರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವಂಚನೆಗೆ ಸಂಬಂಧಿಸಿದಂತೆ 2026ರಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಜನರು ಸುಮಾರು ₹44 ಲಕ್ಷ ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ವಂಚಕರು ವಾಹನ ಸವಾರರಿಗೆ ಟ್ರಾಫಿಕ್ ದಂಡ ಪಾವತಿಸುವಂತೆ ನಂಬಿಸುವ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ಸಂದೇಶಗಳಲ್ಲಿರುವ ನಕಲಿ ಲಿಂಕ್‌ಗಳನ್ನು ತೆರೆಯುವಂತೆ ಮಾಡಿ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಸಿ, ಸಾರ್ವಜನಿಕರ ಬ್ಯಾಂಕ್ ಖಾತೆಯ ಹಣ ಹಾಗೂ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದಾರೆ.

 

ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ. ವಾಹನಗಳ ಮೇಲಿನ ದಂಡದ ವಿವರಗಳನ್ನು ಪರಿಶೀಲಿಸಲು ಮತ್ತು ಪಾವತಿಸಲು ಅಧಿಕೃತ Parivahan ಇ-ಚಲನ್ ವೆಬ್‌ಸೈಟ್ ಅನ್ನೇ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

 

ಅಪರಿಚಿತ ನಂಬರ್‌ಗಳಿಂದ ಬರುವ ಇ-ಚಲನ್ ಸಂದೇಶಗಳು, ಅನುಮಾನಾಸ್ಪದ ಲಿಂಕ್‌ಗಳು ಹಾಗೂ APK ಫೈಲ್‌ಗಳನ್ನು ತೆರೆಯದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದಾದ್ದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.